ADVERTISEMENT

ರಸ್ತೆ ಗುಂಡಿ ಮುಚ್ಚಲು ಅನುದಾನ ನೀಡಿ: ಶಾಸಕ ಎಲ್.ಕೃಷ್ಣನಾಯ್ಕ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 4:45 IST
Last Updated 22 ಆಗಸ್ಟ್ 2025, 4:45 IST
ಎಲ್.ಕೃಷ್ಣನಾಯ್ಕ, ಶಾಸಕ
ಎಲ್.ಕೃಷ್ಣನಾಯ್ಕ, ಶಾಸಕ   

ಹೂವಿನಹಡಗಲಿ: ‘ಕ್ಷೇತ್ರ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳು ಮಳೆಯಿಂದ ಸಂಪೂರ್ಣ ಹಾಳಾಗಿವೆ. ರಸ್ತೆ ಗುಂಡಿಗಳನ್ನು ಮುಚ್ಚಲು ಸರ್ಕಾರ ತಕ್ಷಣ ಅನುದಾನ ನೀಡಬೇಕು’ ಎಂದು ಶಾಸಕ ಎಲ್.ಕೃಷ್ಣನಾಯ್ಕ ಆಗ್ರಹಿಸಿದರು.

ವಿಧಾನಸಭೆ ಅಧಿವೇಶನದಲ್ಲಿ ಬುಧವಾರ ಕ್ಷೇತ್ರದ ಸಮಸ್ಯೆಗಳನ್ನು ಅನಾವರಣಗೊಳಿಸಿದ ಅವರು, ಕ್ಷೇತ್ರದ ವ್ಯಾಪ್ತಿಯ 280 ಕಿ.ಮೀ. ರಾಜ್ಯ ಹೆದ್ದಾರಿ, 300 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಅರ್ಧದಷ್ಟು ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಈ ಸಮಸ್ಯೆ ಕುರಿತು ಏಳನೇ ಬಾರಿ ಸದನದಲ್ಲಿ ಪ್ರಸ್ತಾಪಿಸಿದರೂ ಸರ್ಕಾರ ಬಿಡಿಗಾಸು ಅನುದಾನ ನೀಡಿಲ್ಲ. ಇದರಿಂದ ಸದನಕ್ಕೆ ಬರಲು ಬೇಸರವಾಗುತ್ತಿದೆ ಎಂದು ಹೇಳಿದರು.

ತಾಲ್ಲೂಕು ಕೇಂದ್ರದಿಂದ ದೂರವಿರುವ ಹೊಳಲು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು. ಹೊಳಲು ಸುತ್ತಮುತ್ತ ಬೇಸಿಗೆಯಲ್ಲಿ ಅಗ್ನಿ ಅವಘಡ ಹೆಚ್ಚುವುದರಿಂದ ಅಗ್ನಿಶಾಮಕ ಠಾಣೆ ತೆರೆಯಬೇಕು. ಕ್ಷೇತ್ರ ವ್ಯಾಪ್ತಿಯ ಬನ್ನಿಕಲ್ಲು ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

‘ಕ್ಷೇತ್ರದಲ್ಲಿ ಪ್ರವಾಸ ಮಾಡಿ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದೇನೆ. ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿದೀಪ ವ್ಯವಸ್ಥೆ ಸರಿಪಡಿಸಬೇಕಿದೆ. ಮೂಲಸೌಕರ್ಯಗಳ ಅಭಿವೃದ್ಧಿಗೆ 700 ಕೋಟಿ ರೂ. ಅನುದಾನ ಅಗತ್ಯವಿದೆ. ಪಕ್ಷಪಾತ, ತಾರತಮ್ಯ ಮಾಡದೇ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.