ಬಳ್ಳಾರಿ: ಕೃಷಿ ಭಾಗ್ಯ ಯೋಜನೆಯಡಿ ರಾಜ್ಯದಾದ್ಯಂತ 2024–25ನೇ ಸಾಲಿನಲ್ಲಿ ಒಟ್ಟು 1,918 ಕೃಷಿ ಹೊಂಡಗಳನ್ನು ರೈತರು ನಿರ್ಮಿಸಿಕೊಂಡಿದ್ದಾರೆ. ಮಳೆ ನೀರು ಸಂಗ್ರಹ ಮತ್ತು ಪುನರ್‌ಬಳಕೆಯ ಈ ಯೋಜನೆಗೆ ರಾಜ್ಯ ಸರ್ಕಾರ ಈವರೆಗೆ ₹49.89 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇನ್ನೂ ₹50 ಕೋಟಿ ಅನುದಾನ ಬಾಕಿ ಇರಿಸಿದೆ.
ರಾಜ್ಯದಲ್ಲಿ ತುಮಕೂರು (387), ಮಂಡ್ಯ (187), ಕೋಲಾರ (131), ಚಿಕ್ಕಬಳ್ಳಾಪುರ (116) ಮತ್ತು ಬೆಳಗಾವಿ (98) ಜಿಲ್ಲೆ ಕೃಷಿ ಹೊಂಡಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿವೆ.
ತುಮಕೂರು ಜಿಲ್ಲೆಗೆ ₹3.90 ಕೋಟಿ ಅನುದಾನ ಬಿಡುಗಡೆಯಾಗಿದ್ದು, ₹3.57 ಕೋಟಿ ಬಾಕಿ ಬಿಡುಗಡೆ ಆಗಬೇಕಿದೆ. ಮಂಡ್ಯಕ್ಕೆ ₹1.97 ಕೋಟಿ ಸಿಕ್ಕಿದ್ದು, ₹1.95 ಕೋಟಿ ಲಭ್ಯವಾಗಬೇಕಿದೆ. ಕೋಲಾರಕ್ಕೆ ₹2.63 ಕೋಟಿ ಬಂದಿದ್ದು, ₹1.70 ಕೋಟಿ ಇನ್ನಷ್ಟೇ ಸಿಗಬೇಕು. ಚಿಕ್ಕಬಳ್ಳಾಪುರಕ್ಕೆ ₹2.30 ಕೋಟಿ ಬಂದಿದ್ದು, ₹2.02 ಕೋಟಿ ಬರಬೇಕಿದೆ. ಬೆಳಗಾವಿ ಜಿಲ್ಲೆಗೆ ₹3.89 ಕೋಟಿ ಅನುದಾನ ಸಿಕ್ಕಿದ್ದು, ₹3.81 ಕೋಟಿ ಬಾಕಿ ಬರಬೇಕಿದೆ.
ಬೀದರ್, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೃಷಿ ಭಾಗ್ಯ ಯೋಜನೆಯಡಿ 2024–25ನೇ ಸಾಲಿನಲ್ಲಿ ಯಾವುದೇ ಕೃಷಿ ಹೊಂಡಗಳು ನಿರ್ಮಾಣವಾಗಿಲ್ಲ.
ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಈ ಸಾಲಿನಲ್ಲಿ 39 ಕೃಷಿ ಹೊಂಡಗಳು ನಿರ್ಮಾಣಗೊಂಡಿವೆ. ಬಳ್ಳಾರಿಗೆ ₹1.44 ಕೋಟಿ ಬಿಡುಗಡೆಯಾಗಿದ್ದು ₹48.17 ಲಕ್ಷ ಬಾಕಿ ಬರಬೇಕಿದೆ. ವಿಜಯನಗರಕ್ಕೆ ₹2.19 ಕೋಟಿ ಬಿಡುಗಡೆಯಾಗಿದ್ದು, ₹1.81 ಕೋಟಿ ಬರಬೇಕಿದೆ ಎಂದು ಗೊತ್ತಾಗಿದೆ.
‘ಹಲವು ಜಿಲ್ಲೆಗಳು ಕೃಷಿ ಹೊಂಡ ನಿರ್ಮಾಣದಲ್ಲಿ ನಿಗದಿತ ಗುರಿ ಇನ್ನೂ ತಲುಪಿಲ್ಲ ಎಂಬುದೂ ಗೊತ್ತಾಗಿದೆ. ಈ ಆರ್ಥಿಕ ವರ್ಷ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳು ಬಾಕಿ ಇದ್ದು, ಅಷ್ಟು ಹೊತ್ತಿಗೆ ಇನ್ನೂ ಒಂದಷ್ಟು ಹೊಂಡಗಳು ನಿರ್ಮಾಣವಾಗಲಿವೆ. ಬಾಕಿ ಅನುದಾನ ಹಂತಹಂತವಾಗಿ ಬಿಡುಗಡೆ ಆಗಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿ ಹೊಂಡಗಳನ್ನು ಕೃಷಿ ಭಾಗ್ಯ ಯೋಜನೆಯಡಿ ಪ್ಯಾಕೇಜ್ ರೂಪದಲ್ಲಿ ನಿರ್ಮಿಸಲಾಗುತ್ತದೆ. ಕೃಷಿ ಹೊಂಡ, ಪಾಲಿಥೀನ್ ಹೊದಿಕೆ ಅಥವಾ ಪರ್ಯಾಯ ಮಾದರಿ, ಡಿಸೇಲ್ ಪಂಪ್ ಸೆಟ್, ಲಘು ನೀರಾವರಿ ಘಟಕ, ಕ್ಷೇತ್ರ ಬದು ನಿರ್ಮಾಣಕ್ಕೆ ಪ್ರತ್ಯೇಕವಾಗಿ ಅನುದಾನ ನೀಡಲಾಗುತ್ತದೆ. ಇವುಗಳಿಗೆ ಪ್ರತ್ಯೇಕ ಸಬ್ಸಿಡಿಯನ್ನೂ ಸರ್ಕಾರ ನಿಗದಿಪಡಿಸಿದೆ.
ಕೃಷಿ ಹೊಂಡ ಪ್ಯಾಕೇಜ್ ಮಾದರಿಯ ಕಾರ್ಯಕ್ರಮ. ವಿವಿಧ ಹಂತಗಳಲ್ಲಿ ಅನುದಾನ ಬಿಡುಗಡೆಯಾಗುತ್ತದೆ. ಹೊಂಡಕ್ಕೆ ತಂತಿ ಬೇಲಿ ಆದ ಬಳಿಕವೇ ಅದು ಪರಿಪೂರ್ಣ. ನಂತರವಷ್ಟೇ ಪೂರ್ಣ ಅನುದಾನ ಸಿಗುತ್ತದೆ.–ಡಾ ಸೋಮಸುಂದರ್, ಜಂಟಿ ನಿರ್ದೇಶಕ ಕೃಷಿ ಇಲಾಖೆ ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.