
ಬಳ್ಳಾರಿ: ಜಿಲ್ಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರ್.ಟಿ.ಇ ಕಾಯ್ದೆ ಅನುಷ್ಠಾನ ಕುರಿತು ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಅವರು ಪ್ರಗತಿ ಪರಿಶೀಲನೆ ಮಾಡಿದರು.
‘ಆರ್.ಟಿ.ಇ ನಿಯಮಾವಳಿಗಳ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ಅರಿವು ಹೊಂದದಿರುವುದು ಖೇದದ ಸಂಗತಿ. ಅಧಿಕಾರಿಗಳು ಕಾಯ್ದೆಯ ಸಮಗ್ರ ಮಾಹಿತಿ ಹೊಂದಬೇಕು’ ಎಂದು ತಿಳಿಸಿದರು.
‘ಕರೋನಾ ಸಂದರ್ಭದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಸರ್ಕಾರ ಅನುದಾನ ನೀಡಿತ್ತು. ಇದನ್ನು ಖರ್ಚು ಮಾಡಲಾಗಿದೆಯೇ, ಮಾಹಿತಿ ಎಲ್ಲಿ, ಎಲ್ಲಾ ಶಾಲೆಗಳಲ್ಲಿ ಉಳಿದುಕೊಂಡಿರುವ ಅನುದಾನ ಎಷ್ಟು, ಶಾಲೆಗಳ ಬ್ಯಾಂಕ್ ಖಾತೆ ಪರಿಶೀಲಿಸಿಲ್ಲವೇ’ ಎಂದು ಮಧ್ಯಾಹ್ನ ಬಿಸಿಯೂಟದ ಯೋಜನಾಧಿಕಾರಿಯನ್ನು ಪ್ರಶ್ನೆ ಮಾಡಿದರು.
ಜಿಲ್ಲೆಯಲ್ಲಿ 2021-22 ರಿಂದ 2025 ಮಾರ್ಚ್ ಅಂತ್ಯಕ್ಕೆ ಎಲ್ಲ ಶಾಲೆಗಳ ಖಾತೆಗಳಲ್ಲಿ ಒಟ್ಟು ₹2,24,71,138 ಹಣವಿದೆ ಎಂದು ಮಧ್ಯಾಹ್ನ ಬಿಸಿಯೂಟದ ಯೋಜನಾಧಿಕಾರಿ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಈ ಹಣ ಮಕ್ಕಳಿಗೆ ತಲುಪಬೇಕು, ಇಲ್ಲವೇ ಸರ್ಕಾರಕ್ಕೆ ತಲುಪಬೇಕು ಎಂದರು.
ಕಂಪ್ಲಿ ತಾಲ್ಲೂಕಿನ ರಾಮಸಾಗರ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶಾಲಾ ಮುಖ್ಯೋಪಾಧ್ಯರು, ಎಸ್.ಡಿ.ಎಂ.ಸಿ ಸಮಿತಿ ಒಳಗೊಂಡು ಶಾಲಾ ಪ್ರವೇಶಾತಿ ನೆಪದಲ್ಲಿ ಹಣ ವಸೂಲಿ ಮಾಡಿದ್ದಾರೆ. ಇದರ ಸಮಗ್ರ ತನಿಖೆ ನಡೆಸಿ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಡಿಡಿಪಿಐಗೆ ಸೂಚಿಸಿದರು.
‘ಜಿಲ್ಲೆಯಲ್ಲಿ ಕಳೆದ ವರ್ಷ ಪ್ರೌಢ ಶಾಲೆಗಳಲ್ಲಿ ಉತ್ತೀರ್ಣರಾದ ಸುಮಾರು 9,500 ವಿದ್ಯಾರ್ಥಿಗಳು ಹೊರಗುಳಿದಿದ್ದಾರೆ. ಆದರೆ, ಹಾಜರಾತಿಯಲ್ಲಿ ಇದ್ದಾರೆ. ಸರ್ಕಾರದಿಂದ ಅವರಿಗೆ ನೀಡಲಾಗುತ್ತಿರುವ ಸಮವಸ್ತ್ರ, ಶೂ-ಸಾಕ್ಸ್, ಊಟ, ಮೊಟ್ಟೆ, ಬಾಳೆಹಣ್ಣು ಎಲ್ಲಿಗೆ ಹೋಗುತ್ತಿವೆ’ ಎಂದು ಪ್ರಶ್ನಿಸಿದ ಅವರು, ಈ ಕುರಿತು ಆಯುಕ್ತರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಶಾಲೆಗಳಲ್ಲಿ ಮಕ್ಕಳ ಆಧಾರ್ ಸೀಡಿಂಗ್ ಪ್ರಕ್ರಿಯೆ ಬಾಕಿಯಿದೆ. ಇದರಿಂದ ಅವರಿಗೆ ವಿದ್ಯಾರ್ಥಿವೇತನ ಸೇರಿದಂತೆ ಇತರೆ ಕಾರ್ಯಗಳಿಗೆ ಸಮಸ್ಯೆಯಾಗಲಿದೆ. ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಪಡೆಯಲು ಜನ್ಮ ಪ್ರಮಾಣ ಪತ್ರ ವಿತರಣೆಗೆ ಇರುವ ತೊಡಕುಗಳ ಕುರಿತು ಡಿಸಿ ಮತ್ತು ಜಿಪಂ ಸಿಇಒ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ತ್ರಿವೇಣಿ ಪತ್ತಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರಾದೇವಿ, ಶಾಲಾ ಮತ್ತು ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಉಮಾದೇವಿ ಮತ್ತಿತರರು ಇದ್ದರು.
ವಸತಿನಿಲಯಗಳಿಗೆ ಭೇಟಿ ಪರಿಶೀಲನೆ : ಇದಕ್ಕೂ ಮೊದಲು ನಗರದ ಬಸವ ಭವನ ಹತ್ತಿರದ ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ್ದ ಶಶಿಧರ ಕೋಸಂಬೆ ಕೊಠಡಿ, ಶೌಚಾಲಯ, ಉಗ್ರಾಣ ಕೊಠಡಿ, ಕುಡಿಯುವ ನೀರಿನ ಘಟಕ, ಅಡುಗೆ ಕೊಣೆ ಪರಿಶೀಲಿಸಿದರು. ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿ: ರಾಜ್ಯದ ಶೇ.99 ರಷ್ಟು ಮಕ್ಕಳು ಸಾಮಾಜಿಕ ಜಾಲತಾಣಗಳಿಗೆ ವ್ಯಸನಿಗಳಾಗಿದ್ದು ಮಾನಸಿಕವಾಗಿ ಸದೃಢರಾಗಿಲ್ಲ ಖಿನ್ನತೆಗೆ ಒಳಗಾಗಿದ್ದಾರೆ. ಇದು ವೈಜ್ಞಾನಿಕ ಸಮೀಕ್ಷೆಯಿಂದ ಬಯಲಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಹೇಳಿದರು. ಗುರುವಾರ ನಗರದ ಬಿಡಿಎಎ ಸಭಾಂಗಣದಲ್ಲಿ ರೀಡ್ಸ್ ಸಂಸ್ಥೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಿಎಸಿಎಲ್-ಕೆ ಸಹಯೋಗದಲ್ಲಿ ಆಯೋಜಿಸಿದ್ದ ‘ಬಾಲ್ಯವಿವಾಹ ತಡೆಗಟ್ಟುವಲ್ಲಿ ಸವಾಲುಗಳು ಮತ್ತು ಪರಿಹಾರಗಳು’ ಎಂಬ ವಿಷಯದ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಪೋಷಕರು ಮಕ್ಕಳಿಗೆ ಒಳ್ಳೆಯ ಚಿಂತನೆಗಳನ್ನು ಬಿತ್ತಬೇಕು’ ಎಂದು ಸಲಹೆ ನೀಡಿದರು. ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಮಾತನಾಡಿ ‘ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಇದ್ದಾರೆ. ಆದರೂ ಬಾಲ್ಯವಿವಾಹ ಪೋಕ್ಸೋ ಪ್ರಕರಣಗಳು ಕಂಡುಬರುತ್ತಿವೆ. ಈ ಕುರಿತು ಪ್ರತಿಯೊಬ್ಬರೂ ವಿಮರ್ಶೆ ಮಾಡಿಕೊಳ್ಳಬೇಕಿದೆ’ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ ಮಾತನಾಡಿ ಸರ್ಕಾರ ಶಿಕ್ಷಣಕ್ಕಾಗಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಇವುಗಳನ್ನು ಮಕ್ಕಳು ಬಳಸಿಕೊಳ್ಳಬೇಕು. ಜ್ಞಾನದಿಂದ ಮಾತ್ರ ಎಲ್ಲವನ್ನು ಪಡೆಯಲು ಸಾಧ್ಯ’ ಎಂದು ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.