ADVERTISEMENT

ಸಾಹಿತ್ಯ ಪರಿಷತ್ತು ಕನ್ನಡಿಗರ ಅಸ್ಮಿತೆ: ಮಂಜುನಾಥ ಸ್ವಾಮಿ

ಹೂವಿನಹಡಗಲಿಯಲ್ಲಿ ಕಸಾಪ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 7 ಮೇ 2023, 14:12 IST
Last Updated 7 ಮೇ 2023, 14:12 IST
ಹೂವಿನಹಡಗಲಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ಹೂವಿನಹಡಗಲಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.   

ಹೂವಿನಹಡಗಲಿ: ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಬೆಳಗುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಅಸ್ಮಿತೆಯಾಗಿದೆ ಎಂದು ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಪಿ.ಎಂ. ಮಂಜುನಾಥಸ್ವಾಮಿ ಹೇಳಿದರು.

ಇಲ್ಲಿನ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ತಾಲ್ಲೂಕು ಕಸಾಪ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕನ್ನಡ ಭಾಷೆಯ ವಿಶಿಷ್ಟತೆಯನ್ನು ಸಂರಕ್ಷಿಸಲು ಕಸಾಪ ಬಹುವಾಗಿ ಶ್ರಮಿಸಿದೆ. ಎಲ್ಲ ಕನ್ನಡಿಗರು ಭಾಷೆಯನ್ನು ಶುದ್ಧವಾಗಿ ಬಳಸಬೇಕಿದೆ. ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಂಡು ಸಾಹಿತ್ಯ ಪ್ರೀತಿ ಬೆಳೆಸಬೇಕಿದೆ. ಕನ್ನಡ ಶಾಲೆಗಳ ಸಬಲೀಕರಣದ ಅಗತ್ಯವಿದೆ. ಆಡಳಿತದಲ್ಲಿ ಕನ್ನಡ ಭಾಷೆ ಸಮರ್ಪಕವಾಗಿ ಅನುಷ್ಠಾನವಾಗಬೇಕಾಗಿದೆ ಎಂದರು.

ADVERTISEMENT

ನಿವೃತ್ತ ಉಪನ್ಯಾಸಕ ಎಂ. ಪಿ.ಎಂ. ದಯಾನಂದ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿ ಯುವಜನರು ಕನ್ನಡ ನಾಡು ನುಡಿಯ ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ನಿವೃತ್ತ ಉಪನ್ಯಾಸಕರಾದ ಎಂ.ಪಿ.ಎಂ ದಯಾನಂದಸ್ವಾಮಿ, ಟಿ.ಶಾಂತಮ್ಮ, ಜಾನಪದ ಕಲಾವಿದ ಪ್ರಕಾಶ್, ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಚ್.ಪಿ.ರಮೇಶ, ಉಪನ್ಯಾಸಕರಾದ ಅಶೋಕ ಈಡಿಗರ, ಪಿ.ಪ್ರಸನ್ನಗೌಡ, ಶೈಲಜಾ ಪವಾಡ ಶೆಟ್ಟರ. ಕಸಾಪ ಗೌರವ ಕಾರ್ಯದರ್ಶಿ ಎ. ಎಂ. ಚನ್ನವೀರಸ್ವಾಮಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ಕವಿಗೋಷ್ಠಿ: ಕವಿ ಟಿ.ಎಂ.ನಾಗಭೂಷಣ ಬುದ್ಧನ ಕವಿತೆ ವಾಚಿಸಿ ವಿದ್ಯಾರ್ಥಿ ಕವಿಗೋಷ್ಠಿ ಉದ್ಘಾಟಿಸಿದರು.

ಪ್ರಶಿಕ್ಷಣಾರ್ಥಿಗಳಾದ ಕೆ.ಸುಮಿತ್ರಾ ದೇವಿ, ಎಂ.ಪ್ರವೀಣ್ ಕುಮಾರ್, ಕೆ.ರೇಖಾ, ಮನೋಜ್ ದೊಡ್ಡಮನಿ, ಜಿ.ದೇವಿರಮ್ಮ, ಬಿ.ಶಂಕರ್, ಪಟ್ಟೇದ ಅಂಬಿಕಾ, ಎಸ್.ಎ. ಶಿವರಾಜ್, ಬಿ. ಅರುಣ, ಎಂ.ಎಚ್. ಸುಮಾ ಕವಿತೆ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.