ADVERTISEMENT

ಸಂಡೂರು: ಸ್ನಾತಕೋತ್ತರ ಕೇಂದ್ರದಲ್ಲಿ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿಯರ ಪರದಾಟ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 4:53 IST
Last Updated 26 ನವೆಂಬರ್ 2025, 4:53 IST
ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ
ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ   

ಸಂಡೂರು: ತಾಲ್ಲೂಕಿನ ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಪರಿಶಿಷ್ಟ, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ವಸತಿ ನಿಲಯಗಳ ಕೊರತೆಯಿದೆ. ಇದರಿಂದ ಗ್ರಾಮೀಣ, ನಗರ ಪ್ರದೇಶದ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಕೇಂದ್ರದ ಆವರಣದಲ್ಲಿ ಪರಿಶಿಷ್ಟಜಾತಿ, ಪಂಗಡ, ಹಿಂದೂಳಿದ ವರ್ಗಗಳ ವಿದ್ಯಾರ್ಥಿನಿಯರಿಗೆ ಸರ್ಕಾರವು ಶಾಶ್ವತವಾಗಿ ವಸತಿ ನಿಲಯಗಳನ್ನು ಸ್ಥಾಪನೆ ಮಾಡದೆ ವಿಳಂಬ ಮಾಡಿದ್ದರಿಂದ ಬಳ್ಳಾರಿ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಗಳ ಅರ್ಹ ವಿದ್ಯಾರ್ಥಿನಿಯರು ಉನ್ನತ ವ್ಯಾಸಂಗಕ್ಕಾಗಿ ಪರದಾಡುವಂತಾಗಿದೆ.

ಸ್ನಾತಕೋತ್ತರ ಕೇಂದ್ರದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯದ ಸಮಸ್ಯೆ ಉಂಟಾಗಿದ್ದರಿಂದ ವಿದ್ಯಾರ್ಥಿನಿಯರು ಹೊಸಪೇಟೆ, ತೋರಣಗಲ್ಲು, ಕೂಡ್ಲಿಗಿ, ಸಂಡೂರು ಪಟ್ಟಣದಿಂದ ನಿತ್ಯ ಬಸ್ ಸೇರಿದಂತೆ ಇತರೆ ವಾಹನಗಳಲ್ಲಿ ಪ್ರಯಾಸಪಟ್ಟು ಸಂಚಾರ ಮಾಡುತ್ತಿದ್ದಾರೆ. ವಸತಿಯ ಸಮಸ್ಯೆಯು ನಿರಂತರವಾಗಿರುವುದರಿಂದ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ  ಸಹ ಕುಸಿತಗೊಳ್ಳುತ್ತಿದೆ.

ADVERTISEMENT

ಈ ಸ್ನಾತಕೋತ್ತರ ಕೇಂದ್ರವು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುತ್ತಿದೆ. 1975ರಲ್ಲಿ ಆರಂಭವಾದ ಕೇಂದ್ರ ಪ್ರಸ್ತುತ 52ವರ್ಷಗಳನ್ನು ಪೂರೈಸಿದ್ದು, ಹಲವಾರು ದಶಕಗಳು ಕಳೆದರೂ ವಿದ್ಯಾರ್ಥಿನಿಯರ ನೂತನ ವಸತಿನಿಲಯಗಳ ಸ್ಥಾಪನೆಗೆ ಸಂಡೂರಿನ ಅಧಿಕಾರಿ, ಜನಪ್ರತಿನಿಧಿಗಳ ಇಚ್ಛಾಶಕ್ತಿ ತೋರದೆ ನಿರ್ಲಕ್ಷ್ಯ ವಹಿಸಿದ್ದರಿಂದ ಶಿಕ್ಷಣ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕೇಂದ್ರದಲ್ಲಿ ಎಂ.ಎ ಕನ್ನಡ, ಅರ್ಥಶಾಸ್ತ್ರ, ಇತಿಹಾಸ, ಪುರಾತತ್ವಶಾಸ್ತ್ರ, ಎಂಎಸ್ಸಿ ಗಣಿತಶಾಸ್ತ್ರ, ಭಾತಶಾಸ್ತ್ರ, ರಸಾಯನಶಾಸ್ತ್ರ, ಅನ್ವಯಿಕ ಭೂವಿಜ್ಞಾನ, ಎಂಎಸ್‍ಡಬ್ಲ್ಯೂ ಸಮಾಜಕಾರ್ಯ, ಎಂ.ಟೆಕ್ ಖನಿಜ ಸಂಸ್ಕರಣ ಕೋರ್ಸ್‍ಗಳಿದ್ದು, ಸುಮಾರು 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಕೇಂದ್ರಕ್ಕೆ ತೆರಳುವ ರಸ್ತೆಯಲ್ಲಿ ಜಿಂದಾಲ್, ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(ಎನ್‍ಎಂಡಿಸಿ), ಸ್ಮಯೋರ್, ಎಂಎಂಎಲ್, ವೆಸ್ಕೋ, ಬಿಕೆಜಿ, ಸೇರಿದಂತೆ ಹಲವು ಗಣಿ ಕಂಪನಿಗಳ ಸಾವಿರಾರು ಅದಿರು ಲಾರಿಗಳು ನಿರಂತರವಾಗಿ ಸಂಚಾರ ಮಾಡುವುದರಿಂದ ನಿತ್ಯ ವಿದ್ಯಾರ್ಥಿಗಳು ಪ್ರಾಣ ಭಯದಲ್ಲೇ ಸಂಚರಿಸಬೇಕಾಗಿದೆ. ವಿದ್ಯಾರ್ಥಿಗಳ ಸಂಚಾರದ ಸಂರಕ್ಷಣೆಯ ದೃಷ್ಟಿಯಿಂದ ಸಾರಿಗೆ ಇಲಾಖೆಯು ಪ್ರತ್ಯೇಕ ಬಸ್ ಸೌಲಭ್ಯ ಒದಗಿಸಬೇಕೆಂಬುದು ಜನರ ಒತ್ತಾಯವಾಗಿದೆ.

‘ಸಂಡೂರು ರಾಜ್ಯದಲ್ಲಿಯೇ ಅತಿ ಹೆಚ್ಚು ಆರ್ಥಿಕ ಸಂಪತ್ತನ್ನು ಹೊಂದಿದ ತಾಲ್ಲೂಕು ಆಗಿದ್ದು, ಅನುದಾನಕ್ಕೆ ಕೊರತೆಯಿಲ್ಲ. ಕೇಂದ್ರದಲ್ಲಿ ವಿದ್ಯಾರ್ಥಿನಿಯರ ಶಿಕ್ಷಣದ ಅನುಕೂಲಕ್ಕಾಗಿ ಸರ್ಕಾರವು ಶೀಘ್ರವಾಗಿ ಸುಸಜ್ಜಿತ, ಆಧುನಿಕ ಸೌಲಭ್ಯ ಹೊಂದಿದ ನೂತನ ವಸತಿ ನಿಲಯಗಳನ್ನು ಸ್ಥಾಪಿಸಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು’.
ಶ್ರೀಶೈಲಾ ಆಲ್ದಳ್ಳಿ, ಟಿ.ಕೆ.ಮಂಜುನಾಥ ಸಂಡೂರಿನ ಜನಸಂಗ್ರಾಮ ಪರಿಷತ್‍ನ ಹೋರಾಟಗಾರರು
‘ಕೇಂದ್ರದಲ್ಲಿ ಪರಿಶಿಷ್ಟ, ಹಿಂದೂಳಿದ ವರ್ಗಗಳ ವಿದ್ಯಾರ್ಥಿನಿಯರ ನೂತನ ವಸತಿ ನಿಲಯಗಳನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಹಲವಾರು ಬಾರಿ ಪ್ರಸ್ತಾವ ಸಲ್ಲಿಸಲಾಗಿದ್ದು, ಪ್ರಸ್ತುತ ಹಿಂದುಳಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಯಲಗಳ ಸ್ಥಾಪನೆಗೆ ಸರ್ಕಾರವು ಆದೇಶ ಜಾರಿ ಮಾಡಿದ್ದು, ಶೀಘ್ರ ಭೂಮಿ ಪೂಜೆ ನೆರವೇರಿಸಲಾಗುವುದು’.
ರವಿ ಬಿ. ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ