ಬಳ್ಳಾರಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರತ್ತ ಶೂ ಎಸೆದವನನ್ನು ಬಂಧಿಸಬೇಕು ಎಂದು ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಸಂಘಟನೆ ಕಾರ್ಯಕರ್ತರು ಶೂ ಎಸೆತ ಘಟನೆಯನ್ನು ಖಂಡಿಸಿದರು. ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯ ಸಂಚಾಲಕ ಎ.ಮಾನಯ್ಯ, ‘ಈ ಪ್ರಕರಣ ಅಕ್ಷಮ್ಯ. ಈ ಕೃತ್ಯ ಎಸಗಿದವನಿಗೆ ಕಠಿಣ ಶಿಕ್ಷೆಗೆ ವಿಧಿಸಬೇಕು. ಜತೆಗೆ ಉನ್ನತ ತನಿಖೆ ಕೈಗೊಂಡು ಈ ಘಟನೆಯ ಹಿಂದಿರುವ ಸಂವಿಧಾನ ವಿರೋಧಿಗಳನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.
‘ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ಅವಮಾನಿಸಿದ ಮೊದಲ ಪ್ರಕರಣ ಇದಾಗಿದೆ. ಈ ಅವಮಾನ ಈ ದೇಶಕ್ಕೆ ಮತ್ತು ಸಂವಿಧಾನಕ್ಕೆ ಬಗೆದ ಅಪಚಾರ’ ಎಂದರು.
ಶೋಷಿತ ಸಮುದಾಯಗಳ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎಲ್.ಗಾದಿಲಿಂಗನಗೌಡ, ವಾಲ್ಮೀಕಿ ಸಮಾಜದ ಮುಖಂಡ ಎಸ್.ಶಿವಶಂಕರ್, ಛಲವಾದಿ ಸಂಘದ ಮುಖಂಡ ನರಸಪ್ಪ, ಜಿಲ್ಲಾ ಬಂಜಾರ ಸಮುದಾಯದ ಅಧ್ಯಕ್ಷ ರಾಮನಾಯ್ಕ್, ಸಂಘಟನಾ ಸಂಚಾಲಕ ದೇವದಾಸ್ ಕೆ., ಎಚ್.ಆಂಜನೇಯ, ಬಿ.ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.