ಬಳ್ಳಾರಿ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ಆರಂಭವಾಗಿ ನಾಲ್ಕು ತಿಂಗಳಾಗುತ್ತಾ ಬಂದರೂ ಕೆಲವೆಡೆ ಶೂ, ಸಾಕ್ಸ್ ವಿತರಣೆಯಾಗದಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಇದರ ಪರಿಶೀಲನೆಗೆ ಜಿಲ್ಲೆಯಲ್ಲಿ ‘ಮೆಟಿರಿಯಲ್ ಆಡಿಟ್ ಕಮಿಟಿ (ಪರಿಶೋಧನಾ ಸಮಿತಿ)’ ರಚನೆ ಮಾಡಲಾಗಿದೆ.
ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ 1–10ನೇ ತರಗತಿಯ ಒಟ್ಟು 40.74 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾವಿಕಾಸ ಯೋಜನೆ ಅಡಿಯಲ್ಲಿ ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್ ವಿತರಣೆ ಮಾಡಲು ಒಟ್ಟು ₹410 ಕೋಟಿ ಅನುದಾನ ನೀಡಿ ರಾಜ್ಯ ಸರ್ಕಾರ ಜೂನ್ 21ರಂದೇ ಆದೇಶ ಹೊರಡಿಸಿದೆ.
ಅರ್ಹ ವಿದ್ಯಾರ್ಥಿಗಳ ಪಾದರಕ್ಷೆಗಳ ಅಳತೆ ದಾಖಲಿಸಿ, ಉತ್ತಮ ಗುಣಮಟ್ಟದ ಪಾದರಕ್ಷೆಯನ್ನು
ಸ್ಥಳೀಯವಾಗಿ ಖರೀದಿಸಿ, ವಿತರಣೆ ಮಾಡುವ ಜವಾಬ್ದಾರಿಯನ್ನು ಸಂಬಂಧಿಸಿದ ಶಾಲೆಯ
ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಗೆ ವಹಿಸಲಾಗಿದೆ.
ಆದರೆ, ಜಿಲ್ಲೆಯೂ ಸೇರಿದಂತೆ ರಾಜ್ಯದ ಹಲವಾರು ಶಾಲೆಗಳಲ್ಲಿ ಮಕ್ಕಳಿಗೆ ಇನ್ನೂ ಶೂ, ಸಾಕ್ಸ್ ಅಥವಾ ಸೂಕ್ತ ಪಾದರಕ್ಷೆಗಳನ್ನು ವಿತರಿಸಿಯೇ ಇಲ್ಲ. ಕೆಲವು ಕಡೆ ಅನುದಾನ ಸಿಕ್ಕಿಲ್ಲ ಎಂಬ ಆರೋಪಗಳಿವೆ. ಇನ್ನೂ ಕೆಲವು ಕಡೆ ಶೂ, ಸಾಕ್ಸ್ ಯಾರ ಬಳಿ ಖರೀದಿಸಬೇಕು ಎಂಬ ಪ್ರಶ್ನೆ ಎದುರಾಗಿದೆ. ರಾಜಕೀಯ ನಾಯಕರ ಬೆಂಬಲಿಗರು ಹಾಗೂ ಕೆಲವು ಗುತ್ತೇದಾರರು ಕಮಿಷನ್ ಆಮಿಷವೊಡ್ಡಿ ಲಾಭಿ ಮಾಡುತ್ತಿದ್ದಾರೆ. ಹೀಗಾಗಿ ಶೂ ವಿತರಣೆ ವಿಳಂಬವಾಗಿದೆ.
ವಿದ್ಯಾರ್ಥಿಗಳು ಬರಿಗಾಲಲ್ಲಿ, ಹರಿದ ಚಪ್ಪಲಿ ಧರಿಸಿ, ಹಿಂದಿನ ವರ್ಷದ ಶೂಗಳನ್ನು ಹಾಕಿ ಶಾಲೆಗೆ ಬರುತ್ತಿದ್ದಾರೆ. ಈ ಬಗ್ಗೆ ಬಂದ ದೂರುಗಳನ್ನು ಗಮನಿಸಿದ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಒ, ಶಾಲೆಗಳಲ್ಲಿ ಶೂ ವಿತರಣೆ ಆಗಿದೆಯೇ ಇಲ್ಲವೇ, ಗುಣಮಟ್ಟ ಕಾಯ್ದುಕೊಳ್ಳಲಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ತಂಡ ರಚನೆ ಮಾಡಲು ಶಾಲಾ ಶಿಕ್ಷಣ ಇಲಾಖೆಗೆ ತಿಳಿಸಿದ್ದರು.
ಸಿಇಒ ಸೂಚನೆ ಮೇರೆಗೆ, ಶಿಕ್ಷಣ ಇಲಾಖೆಯು ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು (ಅಧ್ಯಕ್ಷ), ಕ್ಷೇತ್ರ ಶಿಕ್ಷಣಾಧಿಕಾರಿಗಳು (ಉಪಾಧ್ಯಕ್ಷ), ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು (ಸದಸ್ಯ), ಶಿಕ್ಷಣ ಸಂಯೋಜಕರನ್ನು ((ಸದಸ್ಯ) ಒಳಗೊಂಡ ಸಮಿತಿ ರಚಿಸಿದೆ.
ಈ ತಂಡ ತಮ್ಮ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ, ಶೀಘ್ರವೇ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಅದರಂತೆ ಪರಿಶೀಲನೆ ಕಾರ್ಯ ನಡೆಯುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲೇ ಮೊದಲು
ವಿದ್ಯಾರ್ಥಿಗಳ ಹಿತ ಕಾಯಲು ರಾಜ್ಯದಲ್ಲೇ ಬಳ್ಳಾರಿ ಜಿಲ್ಲೆ ಪ್ರಪ್ರಥಮ ಬಾರಿಗೆ ಸಮಿತಿ ರಚನೆಯಂಥ ನಿರ್ಧಾರ ಕೈಗೊಂಡಿದೆ.
‘ಶೂ ವಿತರಣೆಯಲ್ಲಿ ಜಿಲ್ಲಾ ಪಂಚಾಯಿತಿ ಪಾತ್ರವಿಲ್ಲ. ಸರ್ಕಾರ ಎಸ್‌ಡಿಎಂಸಿಗೆ ಇದರ ಹೊಣೆ ನೀಡದೆ. ಹಾಗೆಂದು ನಾವು ಸುಮ್ಮನೆ ಕೂರಲಾಗದು. ವಿತರಣಾ ವ್ಯವಸ್ಥೆಗೆ ಚುರುಕು ನೀಡಲು, ನಿಗಾ ವಹಿಸಲು ಸಮಿತಿ ರಚನೆಯು ಅನುಕೂಲವಾಗಲಿದೆ. ಶೂ ವಿತರಣೆ ಬಗ್ಗೆ ದೂರುಗಳು ಬಂದ ಕೂಡಲೇ ಸಮಿತಿ ರಚನೆ ಮಾಡಲು ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಯಿತು. ರಾಜ್ಯದ ಬೇರೆ ಜಿಲ್ಲೆಗಳಲ್ಲೂ ಇಂಥ ಸಮಿತಿಗಳು ರಚನೆಯಾದರೆ ಒಳ್ಳೆಯದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಾಕ ಅಧಿಕಾರಿ ಮೊಹಮದ್ ಹ್ಯಾರಿಸ್ ಸುಮೇರ್ ಅಭಿಪ್ರಾಯಪಟ್ಟರು.
ಕೆಲವೆಡೆ ಶೂ, ಸಾಕ್ಸ್ ವಿತರಣೆ ಆಗದ ಬಗ್ಗೆ ದೂರು ಬಂದಿದೆ. ಪರಿಶೀಲನೆಗೆ ನಾಲ್ವರ ಸಮಿತಿ ರಚಿಸಲಾಗಿದೆ. ಎಲ್ಲರೂ ತಮ್ಮ ವ್ಯಾಪ್ತಿಯ ಎಲ್ಲ ಶಾಲೆಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಉಮಾದೇವಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.