ADVERTISEMENT

ವಿಧಾನಸಭಾ ಚುನಾವಣೆ 2023: ವಿಜಯನಗರ ಸೇರಿ 19 ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 14:32 IST
Last Updated 19 ಮಾರ್ಚ್ 2023, 14:32 IST
‘ಸೋಷಿಯಲ್‌ ಡೆಮೊಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ’ (ಎಸ್‌ಡಿಪಿಐ) ಪಕ್ಷದ ರಾಜ್ಯ ಮಾಧ್ಯಮ ಉಸ್ತುವಾರಿ ರಿಯಾಜ್‌ ಕಡಂಬು (ಎಡದಿಂದ ಮೂರನೆಯವರು) ಹೊಸಪೇಟೆಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
‘ಸೋಷಿಯಲ್‌ ಡೆಮೊಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ’ (ಎಸ್‌ಡಿಪಿಐ) ಪಕ್ಷದ ರಾಜ್ಯ ಮಾಧ್ಯಮ ಉಸ್ತುವಾರಿ ರಿಯಾಜ್‌ ಕಡಂಬು (ಎಡದಿಂದ ಮೂರನೆಯವರು) ಹೊಸಪೇಟೆಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಹೊಸಪೇಟೆ (ವಿಜಯನಗರ): ‘ವಿಜಯನಗರ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದ 19 ಕ್ಷೇತ್ರಗಳಲ್ಲಿ ‘ಸೋಷಿಯಲ್‌ ಡೆಮೊಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ’ (ಎಸ್‌ಡಿಪಿಐ) ಸ್ಪರ್ಧಿಸಲು ನಿರ್ಧರಿಸಿದೆ’ ಎಂದು ಪಕ್ಷದ ರಾಜ್ಯ ಮಾಧ್ಯಮ ಉಸ್ತುವಾರಿ ರಿಯಾಜ್‌ ಕಡಂಬು ತಿಳಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವಿಜಯನಗರ ಜಿಲ್ಲಾ ಘಟಕದ ಉಪಾಧ್ಯಕ್ಷ ನಜೀರ್‌ ಖಾನ್‌ ಅವರನ್ನು ವಿಜಯನಗರ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ನಿರ್ಧಾರ ತೆಗೆದುಕೊಂಡಿದೆ. ಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ ಐದು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಗಳಿಸುವ ಭರವಸೆ ಇದೆ. ಹೊಸ ಪಕ್ಷವಾದರೂ ಜನ ಎಲ್ಲೆಡೆ ನಮ್ಮನ್ನು ಸ್ವೀಕರಿಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ರಾಜ್ಯದಲ್ಲಿ ಮೊದಲು ಸಮ್ಮಿಶ್ರ ಸರ್ಕಾರ, ಅನಂತರ ಕಾಂಗ್ರೆಸ್‌ ಶಾಸಕರು ಮಾರಾಟವಾಗಿ ಕೋಮುವಾದಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಪರ್ಯಾಯ, ಪಾರಂಪರಿಕ ರಾಜಕಾರಣದ ವಿರುದ್ಧ ನಮ್ಮ ಪಕ್ಷ ಕೆಲಸ ಮಾಡಲಿದೆ ಎಂದರು.

ADVERTISEMENT

ವಿಜಯನಗರ ಕ್ಷೇತ್ರದ ಶಾಸಕರ ಮನೆಗಳ ಸುತ್ತ ದೊಡ್ಡ ಕಾಂಕ್ರೀಟ್‌ ರಸ್ತೆಗಳಿವೆ. ಜನರ ಅಭಿವೃದ್ಧಿ ಕೆಲಸಗಳಾಗಿಲ್ಲ. ಬಡವರ ಬಡಾವಣೆಗಳು ಸ್ಲಂಗಳಾಗಿ ಬದಲಾಗುತ್ತಿವೆ. ಶಾಸಕರ ಆಪ್ತರ ಬಡಾವಣೆಗಳು ಅಭಿವೃದ್ಧಿಯಾಗುತ್ತಿವೆ. ಸಕ್ಕರೆ ಕಾರ್ಖಾನೆ ಬಂದ್‌ ಮಾಡಿದ್ದಾರೆ. ಉದ್ಯೋಗ ಸೃಷ್ಟಿ ಮಾಡಬೇಕಾದವರು ಹಾಳು ಮಾಡಿದ್ದಾರೆ. ಶುದ್ಧ ನೀರಿನ ವ್ಯವಸ್ಥೆ ಇಲ್ಲ. ಕಲುಷಿತ ನೀರು ಕುಡಿದು ನಗರದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ವಿಜಯನಗರದಲ್ಲಿ ಜನಪರ ಕೆಲಸಗಳಾಗುತ್ತಿಲ್ಲ. ರಾಜ್ಯ ಸರ್ಕಾರ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ನಾಡಿನ ಏಕೈಕ ಭಾಷಿಕ ವಿಶ್ವವಿದ್ಯಾಲಯದ ಬೆಳವಣಿಗೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಡಿಎಂಎಫ್‌ ಹಣ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಸಬೇಕು. ಆದರೆ, ಅದರಿಂದ ನಗರದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಶೇ 40ರಷ್ಟು ಕಮಿಷನ್‌ ನುಂಗುವುದರಲ್ಲಿ ಹೊಸಪೇಟೆ ಶಾಸಕರು ಇದ್ದಾರೆ. ಅನೇಕರು ಅವರ ವಿರುದ್ಧ ಮಾತನಾಡಲು ಭಯ ಪಡುತ್ತಿದ್ದಾರೆ. ವಿರೋಧ ಪಕ್ಷಗಳು ಮಾತನಾಡಲು ಧೈರ್ಯ ತೋರುತ್ತಿಲ್ಲ. ಹೀಗಾಗಿಯೇ ಎಸ್‌ಡಿಪಿಐ ಉತ್ತಮ ವಾತಾವರಣ ಸೃಷ್ಟಿಸಲು ಶ್ರಮಿಸುತ್ತಿದೆ ಎಂದು ಹೇಳಿದರು.

ವಿಜಯನಗರ ಕ್ಷೇತ್ರದ ಪಕ್ಷದ ಘೋಷಿತ ಅಭ್ಯರ್ಥಿ ನಜೀರ್‌ ಖಾನ್‌, ಪಕ್ಷದ ಜಿಲ್ಲಾ ಕಾರ್ಯದರ್ಶಿ ಇರ್ಫಾನ್‌ ಕಟಗಿ, ಜಿಲ್ಲಾ ಸದಸ್ಯ ಅಜರುದ್ದೀನ್‌, ರಾಜ್ಯ ಸಮಿತಿ ಸದಸ್ಯ ಸಿ.ಎಲ್‌. ಗಯಾಸುದ್ದೀನ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.