ADVERTISEMENT

ಸುಗ್ಗೇನಹಳ್ಳಿಗೆ ಹೆಚ್ಚುವರಿ ಬಸ್‌ ಓಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 7:52 IST
Last Updated 18 ಜುಲೈ 2019, 7:52 IST
ಭಾರತ ವಿದ್ಯಾರ್ಥಿ ಫೆಡರೇಶನ್‌ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಗುರುವಾರ ಹೊಸಪೇಟೆಯ ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ವಾರ್ತೆ
ಭಾರತ ವಿದ್ಯಾರ್ಥಿ ಫೆಡರೇಶನ್‌ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಗುರುವಾರ ಹೊಸಪೇಟೆಯ ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ವಾರ್ತೆ   

ಹೊಸಪೇಟೆ: ತಾಲ್ಲೂಕಿನ ಸುಗ್ಗೇನಹಳ್ಳಿಗೆ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕೆಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್‌ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಗುರುವಾರ ನಗರದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂತರ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಸುಗ್ಗೇನಹಳ್ಳಿಗೆ ಬೆಳಿಗ್ಗೆ ಹಾಗೂ ಸಂಜೆ ಒಂದು ಸಲ ಬಸ್‌ ಬಂದು ಹೋಗುತ್ತದೆ. ಬೆಳಿಗ್ಗೆ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಕಚೇರಿ ಕೆಲಸಕ್ಕೆ ಹೋಗುತ್ತಾರೆ. ಆದರೆ, ಒಂದೇ ಬಸ್‌ ಇರುವುದರಿಂದ ನೂಕು ನುಗ್ಗಲು, ದಟ್ಟಣೆ ಉಂಟಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಒಂದೇ ಬಸ್‌ಗೆ ನೂರಾರು ಜನ ಮುಗಿ ಬೀಳುತ್ತಿರುವುದರಿಂದ ವಿದ್ಯಾರ್ಥಿನಿಯರು, ಮಹಿಳೆಯರು, ಹಿರಿಯ ನಾಗರಿಕರು ಬಸ್‌ ಹತ್ತಲು ತೊಂದರೆ ಅನುಭವಿಸುತ್ತಿದ್ದಾರೆ. ಬಸ್‌ ಸಿಗದ ಕಾರಣ ಅನೇಕ ವಿದ್ಯಾರ್ಥಿಗಳು ಕಿರುಪರೀಕ್ಷೆ, ಪರೀಕ್ಷೆ ತಪ್ಪಿಸಿಕೊಂಡಿರುವ ನಿದರ್ಶನಗಳಿವೆ. ಅನೇಕರಿಗೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗಳಿಗೆ ಹೋಗಲು ಆಗುತ್ತಿಲ್ಲ. ಹಾಗಾಗಿ ಇನ್ನೆರಡು ಬಸ್ಸುಗಳನ್ನು ಓಡಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

‘ಈ ಕುರಿತು ಈ ಹಿಂದೆಯೂ ಮನವಿ ಸಲ್ಲಿಸಲಾಗಿತ್ತು. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಲ ಗಂಭೀರವಾಗಿ ಪರಿಗಣಿಸಿ, ಅದನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಫೆಡರೇಶನ್‌ ತಾಲ್ಲೂಕು ಕಾರ್ಯದರ್ಶಿ ಜೆ. ಶಿವಕುಮಾರ, ಖಜಾಂಚಿ ಮಾರುತಿ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.