ADVERTISEMENT

ಅನುದಾನ ತಂದಿದ್ದರೆ ದಾಖಲೆ ತೋರಿಸಿ: ಶಾಸಕ ನೇಮರಾಜನಾಯ್ಕ ವಿರುದ್ಧ ‘ಕೈ’ ಸವಾಲು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 14:47 IST
Last Updated 10 ಮಾರ್ಚ್ 2025, 14:47 IST

ಹಗರಿಬೊಮ್ಮನಹಳ್ಳಿ: ‘ತಾಲ್ಲೂಕಿನ ಚಿಲವಾರು ಬಂಡಿ ಏತನೀರಾವರಿ ಯೋಜನೆಗೆ ಅನುದಾನ ತಾವು ಹಿಂದೆ ಶಾಸಕರಾಗಿದ್ದಾಗ ತಂದಿರುವುದಾಗಿ ಹೇಳಿರುವ ಶಾಸಕ ಕೆ.ನೇಮರಾಜನಾಯ್ಕ ಅವರು ದಾಖಲೆ ಸಮೇತ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಪ್ರಮಾಣ ಮಾಡಲಿ’ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೋರಿ ಗೋಣಿಬಸಪ್ಪ ಸವಾಲೆಸೆದರು.

ಪಟ್ಟಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಭೀಮನಾಯ್ಕ ಅವರು ಶಾಸಕರಾಗಿದ್ದಾಗ ಮಾಲವಿ ಜಲಾಶಯಕ್ಕೆ ಶಾಶ್ವತ ನೀರೊದಗಿಸುವ ಯೋಜನೆ ಮತ್ತು ಚಿಲವಾರು ಬಂಡಿ ಏತನೀರಾವರಿ ಯೋಜನೆಗೆ ಅನುದಾನ ನೀಡಿದ್ದರು. ಪಟ್ಟಣದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಎರಡು ಬೃಹತ್ ಯೋಜನೆಗಳಿಗೆ ಅನುದಾನ ನೀಡಿದ್ದನ್ನು ಘೋಷಿಸಿದ್ದರು’ ಎಂದು ತಿಳಿಸಿದರು.

‘ಶಾಸಕ ನೇಮರಾಜನಾಯ್ಕ ಅವರು ಹಿಂದೆ ಶಾಸಕರಾಗಿದ್ದಾಗ ನಯಾಪೈಸೆ ಅನುದಾನ ಇಲ್ಲದೆ ಡಿಪಿಆರ್, ಅಂದಾಜುಪಟ್ಟಿ, ಟೆಂಡರ್ ಇಲ್ಲದೆ ಚುನಾವಣೆ ಉದ್ಧೇಶದಿಂದ ತರಾತುರಿಯಲ್ಲಿ ಭೂಮಿ ಪೂಜೆ ಮಾಡಿದ್ದರು. ಅನುದಾನ ತಂದಿದ್ದಾಗಿ ಈಗ ಸುಳ್ಳು ಹೇಳುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ ಮಾತನಾಡಿ, ‘ಶಾಸಕ ಕೆ.ನೇಮರಾಜನಾಯ್ಕ ಅವರಿಗೆ ಸಾಮಾನ್ಯ ಜ್ಞಾನ ಇಲ್ಲ. ಬರೀ ಹಸಿ ಸುಳ್ಳು ಹೇಳುತ್ತಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಬೆಂಗಳೂರು ಮೂಲದ ಹ್ಯಾಬಿಟೇಟ್ ಕಂಪನಿಗೆ ನೀಡಿ ಶೇ 30ರಿಂದ 40ರಷ್ಟು ಕಮೀಷನ್ ಪಡೆದಿದ್ದಾರೆ’ ಎಂದು ಆರೋಪಿಸಿದರು.

‘ಕಳಪೆ ಕಾಮಗಾರಿಗಳನ್ನು ಮಾಡುವುದಕ್ಕೆ ಕೈ ಜೋಡಿಸಿದ್ದಾರೆ, ಇದು ಅವರ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ಪಟ್ಟಣದ ತೇರು ಬೀದಿಯ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ. 70ಕ್ಕೂ ಹೆಚ್ಚು ಮರಗಳ ಮಾರಣಹೋಮವಾಗಿದೆ’ ಎಂದು ಕಿಡಿಕಾರಿದರು.

ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಕ್ಕಿ ತೋಟೇಶ್, ಪುರಸಭೆ ಸದಸ್ಯರಾದ ಪವಾಡಿ ಹನುಮಂತಪ್ಪ, ಉಪ್ಪಾರ ಬಾಳಪ್ಪ, ತ್ಯಾವಣಗಿ ಕೊಟ್ರೇಶ್, ಗ್ಯಾರಂಟಿ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಸೊನ್ನದ ಗುರುಬಸವರಾಜ, ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್.ಜಂದೀಸಾಹೇಬ್, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಎಚ್.ಪ್ರಭಾಕರ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನೂರ್ ಮಹಮ್ಮದ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ದೇವೇಂದ್ರ, ಬೋವಿ ಹನುಮಂತಪ್ಪ, ವಿ.ರಾಜಪ್ಪ ಮಡಿವಾಳರ ಪ್ರಕಾಶ್, ಡಿಶ್ ಮಂಜುನಾಥ, ಬಾಲಕೃಷ್ಣಬಾಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.