ADVERTISEMENT

ಹೋದ ವರ್ಚಸ್ಸು ಮರು ಗಳಿಸುವ ಯತ್ನ?; ಮತ್ತೆ ಸುದ್ದಿಯಲ್ಲಿ ಶಾಸಕ ಆನಂದ್‌ ಸಿಂಗ್‌

ವಿಜಯನಗರ ಕ್ಷೇತ್ರದಾದ್ಯಂತ ಗುಸುಗುಸು ಚರ್ಚೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ಜುಲೈ 2019, 19:45 IST
Last Updated 1 ಜುಲೈ 2019, 19:45 IST
ಆನಂದ್‌ ಸಿಂಗ್‌
ಆನಂದ್‌ ಸಿಂಗ್‌   

ಹೊಸಪೇಟೆ: ಒಂದಿಲ್ಲೊಂದು ಕಾರಣಕ್ಕಾಗಿ ಸುದ್ದಿಯಲ್ಲಿರುವ ಶಾಸಕ ಆನಂದ್‌ ಸಿಂಗ್‌, ಈ ಬಾರಿ ಜಿಂದಾಲ್‌ಗೆ ಭೂ ಪರಭಾರೆ ಮಾಡುತ್ತಿರುವುದನ್ನು ವಿರೋಧಿಸಿ ರಾಜೀನಾಮೆ ನೀಡಿರುವ ಕಾರಣಕ್ಕಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಇನ್ನಷ್ಟೇ ಅವರ ರಾಜೀನಾಮೆ ಅಂಗೀಕಾರ ಆಗಬೇಕಿದೆ.

ಅವರ ರಾಜೀನಾಮೆ ವಿಚಾರ ಕ್ಷೇತ್ರದಾದ್ಯಂತ ಗುಸುಗುಸು ಚರ್ಚೆಗೆ ಕಾರಣವಾಗಿದೆ. ವಿಜಯನಗರ ಕ್ಷೇತ್ರದಾದ್ಯಂತ ಸೋಮವಾರ ದಿನವಿಡೀ ಇದೇ ವಿಷಯವಾಗಿ ಎಲ್ಲೆಡೆ ಚರ್ಚೆಗಳು ಆಗುತ್ತಿರುವುದು ಕಂಡು ಬಂತು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದರು.

ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಏಕಾಏಕಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ಸಿಂಗ್‌ ಅಚ್ಚರಿ ಮೂಡಿಸಿದ್ದರು. ಅಷ್ಟೇ ಅಲ್ಲ, ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಕೂಡ ಮಾಡಿದ್ದರು. ಆದರೆ, ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಪಕ್ಷದ ವರಿಷ್ಠರ ವಿರುದ್ಧ ಮುನಿಸಿಕೊಂಡಿದ್ದರು. ‘ಆಪರೇಷನ್‌ ಕಮಲ’ದಲ್ಲಿ ಅವರ ಹೆಸರೂ ಕೇಳಿ ಬಂದಿತ್ತು.ನಂತರ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮೂಗು ತೂರಿಸಿ ಶಾಸಕ ಭೀಮಾ ನಾಯ್ಕ ಅವರ ಅಸಮಾಧಾನಕ್ಕೆ ಕಾರಣವಾಗಿದ್ದರು.

ADVERTISEMENT

ಶಾಸಕರಾಗಿ ಆಯ್ಕೆಯಾದ ನಂತರ ಸಂಪೂರ್ಣವಾಗಿ ಸಾರ್ವಜನಿಕ ಸಭೆ–ಸಮಾರಂಭಗಳಿಂದ ಸಿಂಗ್‌ ದೂರವೇ ಉಳಿದಿದ್ದರು. ಜನವರಿಯಲ್ಲಿ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಅವರೊಂದಿಗೆ ಹೊಡೆದಾಟ ಪ್ರಕರಣದ ಬಳಿಕ ಸಂಪೂರ್ಣ ಅಂತರವೇ ಕಾಯ್ದುಕೊಂಡಿದ್ದರು.

ರಾಜ್ಯ ಸರ್ಕಾರ ಜಿಂದಾಲ್‌ಗೆ ಜಮೀನು ಮಾರಾಟ ಮಾಡುತ್ತಿರುವ ವಿಷಯ ರಾಜ್ಯದಾದ್ಯಂತ ತೀವ್ರ ಚರ್ಚೆಯ ಸ್ವರೂಪ ಪಡೆದುಕೊಂಡಿತು. ಆರಂಭದಲ್ಲಿ ಅನೇಕ ದಿನಗಳ ವರೆಗೆ ಮೌನ ವಹಿಸಿದ್ದ ಸಿಂಗ್‌, ಏಕಾಏಕಿ ಸುದ್ದಿಗೋಷ್ಠಿ ನಡೆಸಿ, ರಾಜ್ಯ ಸರ್ಕಾರದ ನಡೆಗೆ ವಿರೋಧ ಸೂಚಿಸಿದರು. ಅಷ್ಟೇ ಅಲ್ಲ, ಜಿಂದಾಲ್‌ ಕಂಪನಿ ಎದುರು ಪ್ರತಿಭಟನೆ ನಡೆಸಿದರು. ಈಗ ಏಕಾಏಕಿ ರಾಜೀನಾಮೆ ನೀಡಿದ್ದಾರೆ.

ಒಂದೇ ವರ್ಷದಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ಆಗಿದ್ದರಿಂದ ಸಹಜವಾಗಿಯೇ ಕ್ಷೇತ್ರದಲ್ಲಿ ಚರ್ಚೆಗೆ ಕಾರಣವಾಗಿದೆ. ‘ಚುನಾವಣೆಯಲ್ಲಿ ಗೆದ್ದ ನಂತರ ಒಮ್ಮೆಯೂ ಸಾರ್ವಜನಿಕರ ಸಮಸ್ಯೆ ಆಲಿಸದ ವ್ಯಕ್ತಿ, ಏಕಾಏಕಿ ಜನರ ಪರವಾಗಿ ಹೋರಾಟ ಮಾಡಲು ಸಾಧ್ಯವೇ? ಇದು ಕಳೆದು ಹೋಗಿರುವ ವರ್ಚಸ್ಸು ಮರಳಿ ಗಳಿಸುವ ಯತ್ನ ಇರಬಹುದು’ ಎಂದು ಜನ ವ್ಯಾಖ್ಯಾನಿಸುತ್ತಿದ್ದಾರೆ.

‘ಯಾವ ರಾಜಕಾರಣಿಗೂ ತತ್ವ, ಸಿದ್ಧಾಂತ ಎಂಬುದು ಇಲ್ಲ. ವೈಯಕ್ತಿಕ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರ, ಕ್ಷೇತ್ರದ ಜನರ ಅಭಿವೃದ್ಧಿ ಯಾರಿಗೂ ಬೇಕಿಲ್ಲ. ಅಧಿಕಾರವೇ ಅವರಿಗೆ ಎಲ್ಲಕ್ಕಿಂತ ಮುಖ್ಯವಾಗಿದೆ’ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ದುರುಗಪ್ಪ ಪೂಜಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ವಿಜಯನಗರ ಜಿಲ್ಲೆ, ಉದ್ಯೋಗ ಸೃಷ್ಟಿ ಬಗ್ಗೆ ಎಂದೂ ಆನಂದ್‌ ಸಿಂಗ್‌ ಮಾತನಾಡಿಲ್ಲ. ಏಕಾಏಕಿ ಈಗ ಕಾಳಜಿ ಬಂದಿದೆ. ಗಣಿಗಾರಿಕೆಗೆ ಸಂಬಂಧಿಸಿದ ಅನೇಕ ಪ್ರಕರಣಗಳು ಸಿಂಗ್‌ ವಿರುದ್ಧ ನ್ಯಾಯಾಲಯದಲ್ಲಿವೆ. ನೈಸರ್ಗಿಕ ಸಂಪತ್ತು ಲೂಟಿ ಹೊಡೆದವರು ಅದರ ಬಗ್ಗೆ ಕಾಳಜಿ ತೋರಿಸುತ್ತಿರುವುದು ಹಾಸ್ಯಾಸ್ಪದ’ ಎಂದು ಸಾಮಾಜಿಕ ಹೋರಾಟಗಾರ ಮರಡಿ ಜಂಬಯ್ಯ ನಾಯಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.