ಸಿರುಗುಪ್ಪ: ತಾಲ್ಲೂಕಿನ ಗಡಿಭಾಗದ ಅಗಸನೂರು ಮತ್ತು ನಾಗಲಾಪುರ ಗ್ರಾಮದಲ್ಲಿ ಮೊಹರಂ ಆಚರಣ ವೇಳೆ ಮದ್ಯ-ಮಾಂಸ ತೊರದು, ಕಟ್ಟುನಿಟ್ಟಿನ ನಿಯಮ ಪಾಲಿಸುವುದು ಮೊದಲಿನಿಂದ ಬಂದ ಸಂಪ್ರದಾಯವಾಗಿದೆ.
ಪೀರಲ ದೇವರಿಗೆ ಮುದಗಲ್‌ನಲ್ಲಿ ಕಾಣಿಕೆ, ಅಯನೂರಿನಲ್ಲಿ ಸಕ್ಕರೆ, ಆಗಸನೂರಿನಲ್ಲಿ ಕಾಯಿ ನೀಡಿ ಹರಕೆ ಸಲ್ಲಿಸುವ ವಿಶೇಷ ಪರಂಪರ ಇಲ್ಲಿನದು.
ಸ್ತ್ರೀಯರು ಹೂ ಮೂಡಿಯುವುದಿಲ್ಲ, ಯಾರೊಬ್ಬರೂ ಪಾದರಕ್ಷೆ ಹಾಕುವುದಿಲ್ಲ, ಹಬ್ಬ ಮುಗಿಯುವವರೆಗೂ ಮನೆಯ ಬಾಗಿಲು ಮುಚ್ಚುವಂತಿಲ್ಲ. ಈ ನಿಯಮ ಗ್ರಾಮದವರಿಗಷ್ಟೆ ಅಲ್ಲದೆ, ಹಬ್ಬಕ್ಕೆ ಬರುವ ಪ್ರತಿಯೊಬ್ಬರೂ ಪಾಲನೆ ಮಾಡುವುದು ಕಡ್ಡಾಯ.
ಬಹುತೇಕ ಕಡೆ ಪೀರಲ ದೇವರ ಮೆರವಣಿಗೆ ರಾತ್ರಿ ವೇಳೆಯಲ್ಲಿ ನಡೆಯುವುದು ಸಾಮಾನ್ಯ. ಆದರೆ, ಈ ಗ್ರಾಮದಲ್ಲಿ 7 ದಿನದ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಪ್ರಾರಂಭವಾಗಿ ಸಂಜೆವರಿಗೆ ನಡೆಯುತ್ತದೆ. ಹರಕೆ ಹೊತ್ತ ಭಕ್ತರು ಕಾಯಿ, ಕೆಂಪು ಸಕ್ಕರೆ ತುಲಾಭಾರ ಮಾಡಿ, ಅರ್ಪಿಸುತ್ತಾರೆ.
ಪೀರಲ ದೇವರ ಹಿಂದೆ ಕುಳಿತ ಮುಸ್ಲಿಂ ಮುಜಾವರು ದೇವರನ್ನು ಎತ್ತಿ ಕೊಡುತ್ತಾರೆ, ಬಿಳಿ ಬಟ್ಟೆ ಮತ್ತು ಪೇಟಾ ಧರಿಸಿದ ನಿಶಾನಿ ಧಾರಿಗಳಲ್ಲಿ ಲಿಂಗಾಯತರೊಬ್ಬರು ದೇವರನ್ನು ಹೊತ್ತು ಸಾಗುತ್ತಾರೆ. ದೇವರನ್ನು ಹಿಡಿದ ಇಬ್ಬರು ಮನೆ ಮನೆಗೆ ಹೋಗಿ ಭಕ್ತರಿಂದ ಪೂಜೆ ಪಡೆಯುತ್ತಾರೆ.
ಜನಪದ ಸೊಗಡಿನ ಹಾಡುಗಳ ಮೂಲಕ ಪೀರಲ ದೇವರ ಚರಿತ್ರೆಯನ್ನು ಹಾಡುತ್ತಾರೆ. ಬುಕ್ಕಿಟ್ಟುಗಾರರು ತಯಾರಿಸಿದ ಭಂಡಾರವನ್ನು ದೇವರು ಎತ್ತುವಾಗ ಎರಚುತ್ತಾರೆ. ಸಂಜೆಯಾಗುತ್ತಿದ್ದಂತೆ ದೇವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತರು 50ಕ್ಕೂ ಹೆಚ್ಚು ತಮಟೆ ನಾದಕ್ಕೆ ಕುಂಬ ಹಿಡಿದು ಮೇಲು ಪದ ಹಾಡುತ್ತ ಕುಣಿದು ಕುಪ್ಪಳಿಸುತ್ತಾರೆ.
ಗ್ರಾಮದ ಶರಬಣ್ಣ ತಾತಾ ಅವರ ಮನೆಯಲ್ಲಿ ಮಾದಲಿ ಸಹಿತ ದಾಸೋಹ ನಡೆಯುತ್ತದೆ.
ಗ್ರಾಮದಲ್ಲಿ ಹಿರಿಯರು ಆಚರಿಸಿಕೊಂಡು ಬಂದಿರುವ ಮೊಹರಂ ಹಬ್ಬವನ್ನು ಇಂದಿಗೂ ಸೌಹಾರ್ದಿದಿಂದ ಆಚರಿಸುತ್ತಿದ್ದೇವೆ
-ಎಂ.ಗೋಪಾಲರೆಡ್ಡಿ ಅಗಸನೂರು ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.