ADVERTISEMENT

ಸಿರುಗುಪ್ಪ: ತಹಶೀಲ್ದಾರ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆ

ವಿವಿಧ ದಾಖಲೆ ಪಡೆಯಲು ನಾಗರಿಕರು ಪರದಾಟ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 4:24 IST
Last Updated 1 ಡಿಸೆಂಬರ್ 2025, 4:24 IST
ಸಿರುಗುಪ್ಪ ನಗರದ ತಾಲ್ಲೂಕು ಆಡಳಿತದಲ್ಲಿರುವ ಆಧಾರ ಕೇಂದ್ರದ ಮುಂದೆ ಕಾದು ಕುಳಿತ ಸಾರ್ವಜನಿಕರು.
ಸಿರುಗುಪ್ಪ ನಗರದ ತಾಲ್ಲೂಕು ಆಡಳಿತದಲ್ಲಿರುವ ಆಧಾರ ಕೇಂದ್ರದ ಮುಂದೆ ಕಾದು ಕುಳಿತ ಸಾರ್ವಜನಿಕರು.   

ಸಿರುಗುಪ್ಪ: ಒಂದು ತಿಂಗಳಿನಿಂದ ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ತಾಲ್ಲೂಕು ಆಡಳಿತದಲ್ಲಿ ಹಾಗೂ ಆಧಾರ ಮತ್ತು ನಾಡ ಕಚೇರಿ ಕೇಂದ್ರದಲ್ಲಿ ವಿವಿಧ ಸೇವೆಗಳಿಗಾಗಿ ನಾಗರಿಕರು ಪರದಾಡುವಂತಾಗಿದೆ.

ಆಧಾರ, ವಂಶವೃಕ್ಷ, ಆದಾಯ ದೃಢೀಕರಣ, ಜಾತಿ ಪ್ರಮಾಣಪತ್ರ, ಸಂಧ್ಯಾ ಸುರಕ್ಷಾ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಸ್ಥಿರವಾಗಿದೆ.

ಶಾಲೆ ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಜನಸಾಮಾನ್ಯರು ಅಗತ್ಯ ದಾಖಲೆ ಪಡೆಯಲು ಸರದಿ ಸಾಲಿನಲ್ಲಿ ದಿನವಿಡೀ ಕಾಯುವಂತಾಗಿದೆ. ವಿದ್ಯುತ್ ಸಂಪರ್ಕದಲ್ಲಿ ಸಣ್ಣ ವ್ಯತ್ಯಾಸವಾದರೆ ಮತ್ತೊಂದು ಕೆಲಸದ ದಿನಕ್ಕಾಗಿ ಕಾಯಬೇಕಿದೆ.ವಿದ್ಯುತ್ ಸಂಪರ್ಕದ ವ್ಯತ್ಯಾಸದಿಂದಾಗಿ ಸುಸೂತ್ರವಾಗಿ ವಿದ್ಯುತ್ ಸಂಪರ್ಕ ಲಭ್ಯವಾಗುತ್ತಿಲ್ಲ. ಇಂತಹ ಎಲ್ಲ ಸಂದರ್ಭಗಳಲ್ಲೂ ನಾಗರಿಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗೆ ಹಿಂದಿರುಗುತ್ತಿದ್ದಾರೆ.

ADVERTISEMENT

ಕಚೇರಿಯ ಕೆಲಸ ಕಾರ್ಯ ಸುಗಮವಾಗಿ ನಡೆಸುವ ಉದ್ದೇಶದಿಂದ ಯು.ಪಿ.ಎಸ್. ಬ್ಯಾಟರಿ ಅಳವಡಿಸಲಾಗಿದೆ. ಆದರೆ, ಬ್ಯಾಟರಿ ಸರಿಯಾಗಿ ಚಾರ್ಜ್ಆಗದೆ ಸಮಸ್ಯೆ ಹೆಚ್ಚಿದೆ.

ಗ್ರಾಮೀಣ ಭಾಗದಿಂದ ನಿತ್ಯ ನೂರಾರು ಸಾರ್ವಜನಿಕರು ವಿವಿಧ ಸೇವೆಗಳಿಗಾಗಿ ತಾಲ್ಲೂಕು ಆಡಳಿತಕ್ಕೆ ಬರುತ್ತಿದ್ದಾರೆ ಆದರೆ ಇಲ್ಲಿ ವಿದ್ಯುತ್‌ ಸಮಸ್ಯೆಯಿಂದ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. ತಹಶೀಲ್ದಾರ್‌ ಈ ಸಮಸ್ಯೆಯನ್ನು ಪರಿಹಾರಿಸಬೇಕು
ಯು.ರಮೇಶ ಸ್ಥಳೀಯ ನಿವಾಸಿ, ಸಿರುಗುಪ್ಪ
ಪಕ್ಕದ ದಾಖಲೆ ಕೊಠಡಿಯಲ್ಲಿ ವಿದ್ಯುತ್‌ ಕೆಲಸ ಕಾರ್ಯಗಳು ಮುಗಿಸಿದ ನಂತರ ಈ ಕೊಠಡಿಯಲ್ಲಿ ಮಾಡಲಾಗುತ್ತದೆ. ಮತ್ತೊಮ್ಮೆ ಬ್ಯಾಟರಿಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು
ಗೌಸಿಯ ಬೇಗಂ ತಹಶೀಲ್ದಾರ್‌, ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.