ADVERTISEMENT

ಚಿತ್ರದುರ್ಗ ಬಸ್‌ ದುರಂತ: ಸ್ಲೀಪರ್‌ ಬಸ್‌ಗಳ ಸ್ಥಿತಿ ಸುಧಾರಣೆ ಯಾವಾಗ?

ಲಕ್ಷಾಂತರ ಕಿಲೊ ಮೀಟರ್‌ ಯಾನ ನಡೆಸಿದ ಬಸ್‌ಗಳು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 2:06 IST
Last Updated 27 ಡಿಸೆಂಬರ್ 2025, 2:06 IST
ಬಳ್ಳಾರಿಯಿಂದ ರಾಜ್ಯದ ವಿವಿಧ ಜಿಲ್ಲೆಗಳ ನಡುವೆ ಸಂಚರಿಸುವ ಸ್ಲೀಪರ್‌ ಬಸ್‌ಗಳು 
ಬಳ್ಳಾರಿಯಿಂದ ರಾಜ್ಯದ ವಿವಿಧ ಜಿಲ್ಲೆಗಳ ನಡುವೆ ಸಂಚರಿಸುವ ಸ್ಲೀಪರ್‌ ಬಸ್‌ಗಳು    

ಬಳ್ಳಾರಿ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಇತ್ತೀಚೆಗೆ ಸಂಭವಿಸಿದ ಸ್ಲೀಪರ್‌ ಬಸ್‌ ದುರಂತವು ರಾಷ್ಟ್ರವನ್ನೇ ತಲ್ಲಣಗೊಳಿಸಿದೆ. ಇದೇ ಹೊತ್ತಲ್ಲೇ ಸ್ಲೀಪರ್‌ ಬಸ್‌ಗಳ ಸುರಕ್ಷತೆಯ ಪ್ರಶ್ನೆ ಏಳುವಂತೆ ಮಾಡಿದೆ. 

ಬಿಎಂಟಿಸಿ ಹೊರತುಪಡಿಸಿ ರಾಜ್ಯ ಸಾರಿಗೆ ಇಲಾಖೆಯ ಎಲ್ಲ ನಿಗಮಗಳ, ಎಲ್ಲ ವಿಭಾಗಗಳಲ್ಲೂ ಜಿಲ್ಲೆಯಿಂದ ಜಿಲ್ಲೆಗೆ, ಹೊರ ರಾಜ್ಯಗಳಿಗೆ ‘ಪ್ರೀಮಿಯಂ ಸೇವೆ’ ಹೆಸರಿನಲ್ಲಿ ಸ್ಲೀಪರ್‌ ಬಸ್‌ಗಳನ್ನು ಓಡಿಸಲಾಗುತ್ತಿದೆ. ಅದರಂತೆ ಕೆಕೆಆರ್‌ಟಿಸಿ ನಿಗಮದಡಿ ಬರುವ ಬಳ್ಳಾರಿ ವಿಭಾಗದಲ್ಲಿಯೂ ಪ್ರೀಮಿಯಂ ಬಸ್‌ ಸೇವೆ ಇದೆ. 

ಬಳ್ಳಾರಿ ವಿಭಾಗವು 24 ಹವಾನಿಯಂತ್ರಣ ರಹಿತ (ನಾನ್‌ ಎಸಿ) 4 ಹವಾ ನಿಯಂತ್ರಿತ (ಎಸಿ) ಬಸ್‌ಗಳನ್ನು ವಿವಿಧ ನಗರಗಳ ನಡುವೆ ಓಡಿಸುತ್ತಿದೆ. 2023ರಲ್ಲಿ ಬಂದ ಎರಡು ಲೈಲೆಂಡ್‌ ಎಸಿ ಬಸ್‌ಗಳನ್ನು ಹೊರತುಪಡಿಸಿದರೆ, ಇನ್ನುಳಿದ ಬಸ್‌ಗಳೆಲ್ಲವೂ ಕನಿಷ್ಠ 13ರಿಂದ 7 ವರ್ಷದಷ್ಟು ಹಳತು. ಈ ಬಸ್‌ಗಳು ಕನಿಷ್ಠ 8 ಲಕ್ಷ ಕಿ.ಮೀ.ನಿಂದ ಗರಿಷ್ಠ 14 ಲಕ್ಷ ಕಿ.ಮೀಗಳಷ್ಟು ಸಂಚರಿಸಿವೆ. 

ADVERTISEMENT

ಸರ್ಕಾರವೇ ಹೇಳುವಂತೆ, ಕರೋನಾ ಎಸಿ ಮತ್ತು ನಾನ್‌ ಎಸಿ ಸ್ಲೀಪರ್‌ಗಳನ್ನು 11 ಲಕ್ಷ ಕಿ.ಮೀ ಅಥವಾ 15 ವರ್ಷ, ಲೈಲೆಂಡ್‌, ಟಾಟಾ ಎ.ಸಿ ಸ್ಲೀಪರ್‌ಗಳನ್ನು 11 ಲಕ್ಷ ಕಿ.ಮೀ ಅಥವಾ 15ವರ್ಷ ವಯಸ್ಸು, ಇವೆರಡರಲ್ಲಿ ಯಾವುದು ಮೊದಲು ಬರುತ್ತದೋ ಅಲ್ಲಿಗೆ ನಿರ್ದಿಷ್ಟ ಬಸ್‌ನ ಸೇವೆಯನ್ನು ನಿಲ್ಲಿಸಬೇಕು. 

ಸದ್ಯ ಹಳತಾಗಿರುವ ಈ ಬಸ್‌ಗಳಲ್ಲಿ ಎಂಜಿನ್‌ ಸಮಸ್ಯೆಗಳಿವೆ. ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತವೆ.  ಸೀಟುಗಳು ಕೊಳಕಾಗಿದ್ದು, ಕಿತ್ತು ಬಂದಿವೆ. ಕಿಟಕಿಗಳು ಗಟ್ಟಿಯಾಗಿದ್ದು, ಜಗ್ಗಿಸಲಾಗದಂತಾಗಿದೆ. ಅನಿವಾರ್ಯ ಪರಿಸ್ಥಿತಿಗಳಲ್ಲಿ ಪ್ರಯಾಣಿಕರು ಕಿಟಕಿಯಿಂದ ಹೊರಬರಲು ಸಾಧ್ಯವಾಗದಂಥ ಸ್ಥಿತಿ ಇದೆ. ಬಹುತೇಕ ವಾಹನಗಳಲ್ಲಿ ಅಗ್ನಿ ನಂದಕವೂ ಇಲ್ಲ. ಹೀಗಾಗಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ ವಿಭಾಗಕ್ಕೆ ಹೊಸ ಬಸ್‌ಗಳು ಸಿಗುವಂತೆ ಮಾಡಬೇಕು ಎಂಬುದು ಪ್ರಯಾಣಿಕರ ಬೇಡಿಕೆ.  

ಹಳತಾದ ಸ್ಲೀಪರ್‌ ಬಸ್‌ಗಳಲ್ಲಿ ಇಂಧನ ಕ್ಷಮತೆ ಕಡಿಮೆಯಾಗಿದೆ. ಲೀಟರ್‌ ಡೀಸೆಲ್‌ಗೆ ಗರಿಷ್ಠ 4 ಕಿ.ಮೀ ಮೈಲೇಜ್‌ ಸಿಗುತ್ತಿದೆ. ಇದು ಕೆಕೆಆರ್‌ಟಿಸಿಯ ಬಳ್ಳಾರಿ ವಿಭಾಗಕ್ಕೆ ಆರ್ಥಿಕ ಹೊರೆ ಸೃಷ್ಟಿಸುತ್ತಿದೆ ಎಂದೂ ಅಧಿಕಾರಿ, ಸಿಬ್ಬಂದಿಗಳು ಹೇಳಿದ್ದಾರೆ. 

ಕೆಕೆಆರ್‌ಟಿಸಿಯು ಹೊಸ ಸ್ಲೀಪರ್‌ ಬಸ್‌ಗಳನ್ನು ಖರೀದಿಸಿದೆ. ಬಳ್ಳಾರಿ ವಿಭಾಗಕ್ಕೆ ಹೊಸ ಬಸ್‌ಗಳನ್ನು ನೀಡುವ ಭರವಸೆ ಸಿಕ್ಕಿದೆ. ಪ್ರೀಮಿಯಂ ಸೇವೆ ನೀಡುತ್ತಿರುವ ಬಸ್‌ಗಳಿಗೆ ಇನ್ನೂ 15 ವರ್ಷ ತುಂಬಿಲ್ಲ. 
ಇನಾಯತ್‌ ಬಾಗ್‌ಬಾನ್‌, ಬಳ್ಳಾರಿ ವಿಭಾಗೀಯ ನಿಯಂತ್ರಕ ಕೆಕೆಆರ್‌ಟಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.