ಹೂವಿನಹಡಗಲಿ: ‘ಸುಂದರ ಚಿತ್ರ ಸೆರೆ ಹಿಡಿಯುವ ಸಲುವಾಗಿ ತಮ್ಮ ನೋವು ಮರೆತು ‘ಸ್ಮೈಲ್ ಪ್ಲೀಸ್’ ಹೇಳುವ ಛಾಯಾಗ್ರಾಹಕರ ಬದುಕಿನಲ್ಲಿ ನಗು ಅರಳಬೇಕು’ ಎಂದು ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಹೇಳಿದರು.
ಪಟ್ಟಣದ ಶಿವಶಾಂತವೀರ ಸಮುದಾಯ ಭವನದಲ್ಲಿ ಶನಿವಾರ ತಾಲ್ಲೂಕು ಛಾಯಾಗ್ರಾಹಕರ ಸಂಘ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
‘ಹಸಿವು, ದಣಿವು ಲೆಕ್ಕಿಸದೇ ಕೆಲಸ ಮಾಡುವ ಛಾಯಾಗ್ರಾಹಕರು ದೇಶ, ನಾಡಿಗೆ ಸ್ಫೂರ್ತಿಯಾಗುವಂತಹ ಚಿತ್ರಗಳನ್ನು ಸೆರೆ ಹಿಡಿಯುತ್ತಾರೆ. ಇವರ ಕೊಡುಗೆಗಳನ್ನು ಸಮಾಜ ಗುರುತಿಸಬೇಕಿದೆ. ಛಾಯಾಗ್ರಾಹಕರು ಕಾಯಕ ಪ್ರಜ್ಞೆ, ಶಿಸ್ತು ಬೆಳೆಸಿಕೊಂಡು ವೃತ್ತಿ ಬದುಕಿನಲ್ಲಿ ಯಶಸ್ಸು ಪಡೆಯಬೇಕು’ ಎಂದು ತಿಳಿಸಿದರು.
‘ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವುದು ಅವಶ್ಯವಿದೆ. ಎಷ್ಟೇ ಉನ್ನತ ಪದವಿಗಳಿಸಿದರೂ ಆತ ಮನೆಗೆ ಮಗನಾಗಿರಬೇಕು, ಊರಿಗೆ ಉತ್ತಮ ನಾಗರಿಕ ಆಗಿರಬೇಕು. ಇಂತಹ ಸಂಸ್ಕಾರವನ್ನು ಬಾಲ್ಯದಲ್ಲೇ ಕಲಿಸಬೇಕು’ ಎಂದರು.
ಶ್ರೀರಾಮ ದೇವಸ್ಥಾನ ಧರ್ಮದರ್ಶಿ ಡಾ.ರಾಕೇಶಯ್ಯ, ಕಾರ್ಮೆಲ್ ಸೇವಾ ಸದನದ ಡೆಂಜಿಲ್ ವೇಗಸ್, ರಾಮಸ್ವಾಮಿ ರಾಕೇಶಯ್ಯ, ಮಸ್ಸರ್ ವಿದ್ಯಾ ಸಂಸ್ಥೆಯ ನವಾಜ್ ಮುಈನಿ ಅಲ್ ಫೈಝಾನಿ, ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಪಿ.ಎಂ.ಶಿವಪ್ರಕಾಶ್, ಛಾಯಾಗ್ರಾಹಕ ಮಲ್ಲಿಕಾರ್ಜುನ ಮಾತನಾಡಿದರು.
ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸಿರಸಂಗಿ ಅಧ್ಯಕ್ಷತೆ ವಹಿಸಿದ್ದರು. ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಕರಿಬಸವರಾಜ, ತಾಲ್ಲೂಕು ಘಟಕದ ಅಧ್ಯಕ್ಷ ಗಡಿಗಿ ನವೀನಕುಮಾರ್, ಗೌರವ ಅಧ್ಯಕ್ಷ ಬಿ.ಸಿದ್ದೇಶ, ಕೆ.ರಾಮಣ್ಣ, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಎ.ಎಂ.ಸೋಮಶೇಖರಯ್ಯ, ಮಂಜುನಾಥ, ಎಚ್.ಎಂ.ರಾಘವೇಂದ್ರ, ಕೆ.ಜಿ.ಕೊಟ್ರೇಶ, ಕಾರ್ಮಿಕ ನಿರೀಕ್ಷಕ ಕೆ.ಮೌನೇಶ ಇದ್ದರು.
ಶೈಕ್ಷಣಿಕ, ಔದ್ಯೋಗಿಕ ಸಾಧನೆಗೈದ ಛಾಯಾಗ್ರಾಹಕರ ಮಕ್ಕಳಾದ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿರುವ ಬಸೆಟ್ಟಿ ಆದರ್ಶ, ಎಂಬಿಬಿಎಸ್ ಗೆ ಪ್ರವೇಶ ಪಡೆದಿರುವ ಶರತ್ ಕುಮಾರ್ ಮಡಿವಾಳರ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕ ಪಡೆದಿರುವ ನಕ್ಷತ್ರ, ಪೃಥ್ವಿರಾಜ ಕರಣಂ, ಗಾಯತ್ರಿ ಅಕ್ಕಿ ಹಾಗೂ ಪೋಷಕರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.