ADVERTISEMENT

ಸಂಡೂರು: ಸ್ಕಂದಪುರದ ಅಂದ ಹೆಚ್ಚಿಸಿದ ಸಸ್ಯೋದ್ಯಾನ

ವೈವಿಧ್ಯಮಯ ಗಿಡಗಳು, ಸ್ಥಳೀಯರ ಕಾಳಜಿ ಮಾದರಿ

ಪ್ರಜಾವಾಣಿ ವಿಶೇಷ
Published 13 ಆಗಸ್ಟ್ 2023, 5:52 IST
Last Updated 13 ಆಗಸ್ಟ್ 2023, 5:52 IST
ಸಂಡೂರು ಪಟ್ಟಣದ ಸ್ಕಂದಪುರ ಬಡಾವಣೆಯಲ್ಲಿ ನಿರ್ಮಿಸಿರುವ ವೃಕ್ಷೋಧ್ಯಾನದ ಹೊರ ನೋಟ
ಸಂಡೂರು ಪಟ್ಟಣದ ಸ್ಕಂದಪುರ ಬಡಾವಣೆಯಲ್ಲಿ ನಿರ್ಮಿಸಿರುವ ವೃಕ್ಷೋಧ್ಯಾನದ ಹೊರ ನೋಟ   

ರಾಮು ಅರಕೇರಿ

ಸಂಡೂರು: ಸಾಮಾನ್ಯವಾಗಿ ಉದ್ಯಾನಗಳೆಂದರೆ ಗಿಡಮರ, ಘಮಘಮಿಸುವ ಹೂಗಳು, ಸಂಜೆ ವಾಯುವಿಹಾರಕ್ಕೆ ಬರುವ ಹಿರಿಯರು, ಆಟಿಕೆಗಳಲ್ಲಿ ಕುಣಿದಾಡುವ ಮಕ್ಕಳ ಚಿತ್ರ ಕಣ್ಮುಂದೆ ಬರುತ್ತದೆ.‌ ಸಂಡೂರು ಪಟ್ಟಣದ ಸ್ಕಂದಪುರ ಬಡಾವಣೆಯಲ್ಲಿರುವ ಈ ವೃಕ್ಷೋದ್ಯಾನ ಕೊಂಚ ಭಿನ್ನವಾಗಿದೆ.

ಅರಣ್ಯ ಇಲಾಖೆಯವರು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಡಿ ಸುಮಾರು  ₹1 ಕೋಟಿ 12 ಲಕ್ಷ ವೆಚ್ಚದಲ್ಲಿ ವೃಕ್ಷೋದ್ಯಾನ ಅಭಿವೃದ್ಧಿಪಡಿಸಿದ್ದಾರೆ. ಪ್ಯಾರಾಗೋಲ, ಮಕ್ಕಳ‌ ಆಟದ‌ ಉದ್ಯಾನ‌, ಔಷಧಿ ಸಸ್ಯಗಳ ವನ, ತೆರೆದ ಜಿಮ್, ಆ್ಯಂಪಿಥಿಯೇಟರ್, ಸ್ವಾತಂತ್ರ್ಯ ಉದ್ಯಾನ, ಆಲಂಕಾರಿಕ ಗಿಡಗಳು ಈ ವೃಕ್ಷೋಧ್ಯಾನದಲ್ಲಿ ವಿಶೇಷವಾಗಿ ಕಾಣಬಹುದು. ಜೊತೆಗೆ ಸ್ಥಳೀಯರೇ ಆಸಕ್ತಿಯಿಂದ ರಾಜ್ಯ, ಹೊರ ರಾಜ್ಯಗಳಿಂದ ವಿಶೇಷ ಗಿಡಗಳನ್ನು ತಂದು ನೆಟ್ಟು ಉದ್ಯಾನದ ವೈಶಿಷ್ಟ್ಯ ಹೆಚ್ಚಿಸಿದ್ದಾರೆ.

ADVERTISEMENT

ವಿವಿಧೆಡೆಯ 60 ವಿಧ ಸಸ್ಯಗಳು: ಇಲ್ಲಿನ ಸ್ಕಂದಪುರ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಚಾರಣ ಶ್ರೀನಿವಾಸ್, ನಾಗೇಂದ್ರ ಕಾವೂರು, ರಾಮಾಂಜಿನೇಯ, ರಮೇಶ್ ಚಂದ್ರಪ್ಪ ತಂಡದವರು ಸುಮಾರು 60 ಕ್ಕೂ ಹೆಚ್ಚು ವಿಶಿಷ್ಟ ಗಿಡಗಳನ್ನು ತಂದು ನೆಟ್ಟಿದ್ದಾರೆ. ಹಿಮಾಲಯದ ರುದ್ರಾಕ್ಷಿ ಸಸ್ಯದಿಂದ ಹಿಡಿದು ರಾಜ್ಯದ ಬೆಂಗಳೂರು, ಶಿವಮೊಗ್ಗ, ಆಲಮಟ್ಟಿ, ದಾಂಡೇಲಿ, ಉಡುಪಿ, ಕುಂದಾಪುರ, ಬನವಾಸಿ, ಬ್ರಹ್ಮಾವರ ಸೇರಿದಂತೆ ಬೇರೆಬೇರೆ ಊರುಗಳಿಂದ ಗಿಡಗಳನ್ನು ತಂದು ನೆಟ್ಟಿದ್ದಾರೆ.

ಔಷಧಿ ಗುಣದ ನೋನಿ, ಆನೆಸೇಬು, ಹಿಪ್ಪೆ, ದಾಲ್ಚಿನ್ನಿ, ಛತ್ರಿಮರ, ಕುಂಟುನೇರಳೆ, ಬೂರುಗ, ರಾಮಪತ್ರೆ, ಹೆಬ್ಬಲಸು, ಪನ್ನೇರಳೆ, ರಾಮಅಡಿಕೆ, ಬಗಿನಿ, ಅಮಟೆಕಾಯಿ, ವಾಟೆಹುಳಿ, ಮುರುಗಲ, ಚಾಪೆಹಣ್ಣು, ಉಪ್ಪಳಿಗೆ ಸೇರಿದಂತೆ ಅನೇಕ ಜಾತಿಯವ ಮರಗಳನ್ನು ನೆಟ್ಟಿದ್ದಾರೆ. ಅದೇ ರೀತಿ ಬಿಳಿಸಂಪಿಗೆ, ಕದಂಬ, ಚಿನ್ನದ ಕಹಳೆ, ನಾಗಲಿಂಗಪುಷ್ಪ, ನಾಗಕೇಸರ, ಬಕುಳ, ಕೋಲಸಂಪಿಗೆ, ಅಪೂರ್ವ ಚಂಪಕ, ಸೀತಾ ಅಶೋಕ, ಅಳಿವಿನಂಚಿನಲ್ಲಿರುವ ಸುರಗಿ ಹೂ, ಹಾಲೇಮರ ಮುಂತಾದ ಹೂವಿನ ಗಿಡಗಳನ್ನು ತಂದು ಬೆಳೆಸಲಾಗುತ್ತಿದೆ.

ಅಧ್ಯಯನ ಯೋಗ್ಯ: ಹಲವಾರು ವಿಶೇಷ ಗಿಡಗಳನ್ನು ಹೊಂದಿರುವ ಈ ಉದ್ಯಾನವು ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕ ಸ್ಥಳ. ಸಂಡೂರಿಗೆ ಬರುವ ಪ್ರವಾಸಿಗರಿಗೂ ಈ ಪಾರ್ಕ್ ವಿಶೇಷ ತಾಣವಾಗಲಿದೆ ಎನ್ನುತ್ತಾರೆ ಸ್ಥಳೀಯರಾದ ಚಾರಣ ಶ್ರೀನಿವಾಸ್.

ಉದ್ಯಾನದ ಸುತ್ತಲೂ ಹಾಕಿರುವ ತಂತಿ ಬೇಲಕಿ ಮತ್ತಷ್ಟು ಎತ್ತರವಾಗಿಸಬೇಕು, ನಡಿಗೆಗೆ ನಿರ್ಮಿಸಿರುವ ಪಾದಾಚಾರಿ ಮಾರ್ಗದ ಕೆಲಸ ಪೂರ್ಣಗೊಳಿಸಬೇಕು, ಕಸ ನಿರ್ವಹಣೆಗೆ ಕಸದ ಡಬ್ಬಿಗಳನ್ನು ಇರಿಸಬೇಕು, ಶೌಚಾಲಯ, ಆರ್.ಒ ಪ್ಲಾಂಟ್ ಜನರ ಬಳಕೆಗೆ ಆರಂಭವಾಗಬೇಕೆಂಬ ಆಗ್ರಹ ಸ್ಥಳೀಯರದ್ದು.

ಸಂಡೂರಿನ ಸ್ಕಂದಪುರ ಪಾರ್ಕ್ ನಲ್ಲಿ ನೆಟ್ಟಿರುವ ಅಳಿವಿನಂಚಿನ ಸುರಗಿ ಹೂವಿನ ಸಸ್ಯ
12ಎಸ್ಎಎನ್03: ವಿಶೇಷ ಔಷಧೀಯ ಗುಣಗಳನ್ನು ಹೊಂದಿರುವ ನೋನಿ ಮರವನ್ನು ಸ್ಕಂದಪುರ ಬಡಾವಣೆಯಲ್ಲಿ ಬೆಳೆಸಲಾಗುತ್ತಿದೆ.
12ಎಸ್ಎಎನ್02:ಸಂಡೂರಿನ ಸ್ಕಂದಪುರ ಪಾರ್ಕ್ ನಲ್ಲಿ ನೆಟ್ಟಿರುವ ಅಳಿವಿನಂಚಿನ ಸುರಗಿ ಹೂವಿನ ಸಸ್ಯ.
12ಎಸ್ಎಎನ್04:ಅಪೂರ್ವ ಚಂಪಕವೆಂಬ ಸ್ಥಳೀಯವಲ್ಲದ ವಿಶಿಷ್ಠ ಜಾತಿ‌ಹೂವಿನ ಮರವನ್ನು ಸ್ಕಂದಪುರ ಬಡವಾಣೆಲ್ಲಿ ನೆಡಲಾಗಿದೆ.
ಸ್ಕಂದಪುರ ಟ್ರೀ ಪಾರ್ಕ್‌ಗೆ ಜಿಲ್ಲಾ ಖನಿಜ ನಿಧಿಯಡಿ ಮತ್ತೆ ₹1 ಕೋಟಿ ಅನುದಾನ ಒದಗಿಸಿ ಕಾರ್ಗಿಲ್ ವಿಜಯೋತ್ಸವ ಮತ್ತು 75 ನೇ ಸ್ವಾತಂತ್ರ್ಯೋತ್ಸವದ ನೆನಪಿನ ಪ್ರತಿಮೆಗಳನ್ನು ನಿರ್ಮಿಸಿ ಮತ್ತಷ್ಟು ಆಕರ್ಷಕಗೊಳಿಸಲಾಗುವುದು
ಟ್ರೀ ಪಾರ್ಕ್‌ನಲ್ಲಿ ಮಾಹಿತಿಗಾಗಿ ಎಲ್ಲಾ ಗಿಡಗಳ ಮುಂದೆ ಒಂದೊಂದು ಕ್ಯೂಆರ್ ಕೋಡ್ ಫಲಕ ಹಾಕಲಾಗುವುದು. ಅಲ್ಲಿ ಸ್ಕ್ಯಾನ್ ಮಾಡಿದಾಗ ಆಯಾ ಸಸ್ಯಗಳ ಹೆಸರು ವೈಜ್ಞಾನಿಕ ಹೆಸರು ಮತ್ತು ಗಿಡದ ಉಪಯೋಗಗಳ ಸಂಪೂರ್ಣ ಮಾಹಿತಿ ಸಿಗುವಂತೆ ಮಾಡಲಾಗುವುದು –ಸಂದೀಪ್ ಹಿಂದೂರಾವ್ ಸೂರ್ಯವಂಶಿ ಉಪ ಅರಣ್ಯ ಸಂರಕ್ಷಣಾಧಿಕಾರಿ
–ಸಂದೀಪ್ ಹಿಂದೂರಾವ್ ಸೂರ್ಯವಂಶಿ ಉಪ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.