ADVERTISEMENT

ಬಳ್ಳಾರಿ ಜಿಲ್ಲೆಗೆ ಶ್ರೀರಾಮುಲು ಕೊಡುಗೆ ಶೂನ್ಯ: ವಿ.ಎಸ್‌. ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 14:14 IST
Last Updated 17 ಅಕ್ಟೋಬರ್ 2018, 14:14 IST
ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪನವರು ಬುಧವಾರ ಸಂಜೆ ಹೊಸಪೇಟೆಯ ಚಿತ್ರಕೇರಿಯಲ್ಲಿ ಪಾದಯಾತ್ರೆ ಕೈಗೊಂಡು ಮತಯಾಚಿಸಿದರು–ಪ್ರಜಾವಾಣಿ ಚಿತ್ರ
ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪನವರು ಬುಧವಾರ ಸಂಜೆ ಹೊಸಪೇಟೆಯ ಚಿತ್ರಕೇರಿಯಲ್ಲಿ ಪಾದಯಾತ್ರೆ ಕೈಗೊಂಡು ಮತಯಾಚಿಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪನವರು ಬುಧವಾರ ನಗರದಲ್ಲಿ ಪಾದಯಾತ್ರೆ ಕೈಗೊಂಡು ಮತಯಾಚಿಸಿದರು.

ಮಧ್ಯಾಹ್ನ ವಕೀಲರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ಚುನಾವಣೆಯಲ್ಲಿ ಬೆಂಬಲಿಸುವಂತೆ ಕೋರಿದರು. ನಂತರ ಮೇನ್‌ ಬಜಾರ್‌ನಲ್ಲಿರುವ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠಕ್ಕೆ ತೆರಳಿ ದರ್ಶನ ಪಡೆದರು. ಅದಾದ ಬಳಿಕ ಚಿತ್ರಕೇರಿ, ಬಾಣದಕೇರಿ ಹಾಗೂ ಉಕ್ಕಡಕೇರಿಯಲ್ಲಿ ಪಾದಯಾತ್ರೆ ನಡೆಸಿ, ಮತ ಕೇಳಿದರು.

ಇದಕ್ಕೂ ಮುನ್ನ ಮಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಗ್ರಪ್ಪ, ‘ಶ್ರೀರಾಮುಲು ಅವರು ಸಂಸದರಾಗಿ, ಶಾಸಕರಾಗಿ ಜಿಲ್ಲೆಗೆ ಏನೂ ಮಾಡಿಲ್ಲ. ಸುಳ್ಳು ಭರವಸೆಗಳನ್ನು ಕೊಟ್ಟು ಕಾಲಹರಣ ಮಾಡಿದ್ದಾರೆ. ಅವರಿಂದ ಜಿಲ್ಲೆಯಲ್ಲಿ ಮತ್ತೊಂದು ಉಪಚುನಾವಣೆ ಎದುರಾಗಿದೆ. ಖಂಡಿತವಾಗಿಯೂ ಜನ ಅವರು ಹಾಗೂ ಅವರ ಪಕ್ಷದ ಅಭ್ಯರ್ಥಿಯನ್ನು ತಿರಸ್ಕರಿಸುತ್ತಾರೆ’ ಎಂದು ಭರವಸೆ ವ್ಯಕ್ತಪಡಿಸಿದರು.

ADVERTISEMENT

‘ಶ್ರೀರಾಮುಲು ಅವರು ಸಂಸದರಾಗಿದ್ದಾಗ ಒಮ್ಮೆ ಕೂಡ ಜನರ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಪಕ್ಷ ನನ್ನನ್ನು ಗುರುತಿಸಿ ಟಿಕೆಟ್‌ ನೀಡಿದೆ. ನಾನೆಂದೂ ಇದುವರೆಗೆ ಜಾತಿ, ಭ್ರಷ್ಟಾಚಾರದ ರಾಜಕೀಯ ಮಾಡಿಲ್ಲ. ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಸ್ವಭಾವ ಇಲ್ಲ. ನಾನು ಏನಾದರೂ ತಪ್ಪು ಮಾಡಿದರೆ ಅದನ್ನು ತೋರಿಸಬೇಕು. ನ್ಯಾಯ ಮಾರ್ಗದಲ್ಲಿ ರಾಜಕಾರಣ ಮಾಡುತ್ತ ಬಂದಿದ್ದೇನೆ’ ಎಂದರು.

‘ನರೇಂದ್ರ ಮೋದಿಯವರ ಹಿಟ್ಲರ್‌ ಆಡಳಿತ, ಬಿಜೆಪಿಯ ರಾಜಕೀಯ ಅಟ್ಟಹಾಸದಿಂದ ಜನ ರೋಸಿ ಹೋಗಿದ್ದಾರೆ. ಮೋದಿಯವರು 2014ರ ಲೋಕಸಭೆ ಚುನಾವಣೆಗೂ ಮುನ್ನ ನೀಡಿರುವ ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳೇ ಇದನ್ನು ಹೇಳಿದ್ದಾರೆ. ಹೀಗಾಗಿ ಜನ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಕೈ ಹಿಡಿಯುತ್ತಾರೆ ಎಂಬ ಭರವಸೆ ಇದೆ’ ಎಂದು ಹೇಳಿದರು.

ಶಾಸಕ ಆನಂದ್‌ ಸಿಂಗ್‌, ಪಕ್ಷದ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಬಿ.ವಿ. ಶಿವಯೋಗಿ, ನಗರಸಭೆ ಅಧ್ಯಕ್ಷ ಗುಜ್ಜಲ್‌ ನಿಂಗಪ್ಪ, ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಫಹೀಮ್‌ ಬಾಷಾ, ಗುಜ್ಜಲ್‌ ರಘು, ಗುಜ್ಜಲ್‌ ನಾಗರಾಜ್‌, ತಾರಿಹಳ್ಳಿ ವೆಂಕಟೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.