ADVERTISEMENT

‘ಬಳ್ಳಾರಿ ಜಿಲ್ಲೆಗೆ ಶ್ರೀರಾಮುಲು ಕೊಡುಗೆ ಶೂನ್ಯ’

ವಿಜಯನಗರ ಜಿಲ್ಲೆಗೆ ಆಗ್ರಹಿಸಿ ಅ. 25ರಂದು ಹಂಪಿಯಿಂದ ಜಾಥಾ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 13:08 IST
Last Updated 4 ಅಕ್ಟೋಬರ್ 2019, 13:08 IST
ಜೆ.ಎನ್‌. ಕಾಳಿದಾಸ್‌
ಜೆ.ಎನ್‌. ಕಾಳಿದಾಸ್‌   

ಹೊಸಪೇಟೆ: ‘ಬಳ್ಳಾರಿ ಜಿಲ್ಲೆಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಕೊಡುಗೆ ಏನೂ ಇಲ್ಲ. ಅದರಲ್ಲೂ ಹಿಂದುಳಿದ ಪಶ್ಚಿಮ ತಾಲ್ಲೂಕುಗಳ ಅಭಿವೃದ್ಧಿಗೆ ಅವರು ಏನೂ ಮಾಡಲಿಲ್ಲ. ಅವರ ಸಾಧನೆ ಶೂನ್ಯ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಬಣ) ರಾಜ್ಯ ಸಂಚಾಲಕ ಜೆ.ಎನ್‌. ಕಾಳಿದಾಸ್‌ ಟೀಕಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶ್ರೀರಾಮುಲು ಅವರು ಎರಡು ಸಲ ಸಚಿವರಾಗಿ, ಸಂಸದರಾದರೂ ಜಿಲ್ಲೆಗೆ ಏನೂ ಮಾಡಲಿಲ್ಲ. ನೂತನ ವಿಜಯನಗರ ಜಿಲ್ಲೆಯಾಗಬೇಕೆಂಬ ಕೂಗಿಗೆ ಸ್ಪಂದಿಸಿಲ್ಲ. ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಆರಂಭಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಅವರನ್ನು ಭೇಟಿಯಾದರೆ ಅದಕ್ಕೆ ಅವರು ಸ್ಪಂದಿಸಲಿಲ್ಲ. ರೈತರ ಬಗ್ಗೆ ಅವರಿಗಿರುವ ಕಾಳಜಿ ಇದು ತೋರಿಸುತ್ತದೆ’ ಎಂದರು.

‘ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಬಂದ್‌ ಆಗಿ ನಾಲ್ಕು ವರ್ಷಗಳಾಗುತ್ತಿವೆ. ಇದರಿಂದ ಕಬ್ಬು ಬೆಳೆಗಾರರು ಅತಿ ಕಡಿಮೆ ಬೆಲೆಗೆ ಬೇರೆಡೆ ಕಬ್ಬು ಸಾಗಿಸುತ್ತಿದ್ದಾರೆ. ಹಾಕಿದ ಬಂಡವಾಳ ಸಹ ಕೈಸೇರುತ್ತಿಲ್ಲ. ಪರಿಸ್ಥಿತಿ ಹೀಗಿದ್ದರೂ ಜನಪ್ರತಿನಿಧಿಗಳು ಅದರ ಬಗ್ಗೆ ಸೊಲ್ಲು ಎತ್ತದಿರುವುದು ದುರದೃಷ್ಟಕರ’ ಎಂದು ಹೇಳಿದರು.

ADVERTISEMENT

‘ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ನೂತನ ಜಿಲ್ಲೆ ರಚಿಸಬೇಕೆಂಬ ಬೇಡಿಕೆ ದಶಕದಿಂದ ಇದೆ. ವಿಜಯನಗರ ಜಿಲ್ಲಾ ಹೋರಾಟ ಸಮಿತಿ ಸತತ ನೂರು ದಿನಗಳ ಧರಣಿ ಸತ್ಯಾಗ್ರಹ ನಡೆಸಿತ್ತು. ಸಮಿತಿಯ ಮುಖಂಡ ಡಾ. ಉಳ್ಳೇಶ್ವರ ಅವರು ಅನುಮಾನಾಸ್ಪದ ರೀತಿಯಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅಂದಿನ ಹೋರಾಟಕ್ಕೆ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ. ಈಗ ಬಲ ಬಂದಿದೆ’ ಎಂದು ತಿಳಿಸಿದರು.

‘ಅನರ್ಹ ಶಾಸಕ ಆನಂದ್‌ ಸಿಂಗ್‌ ಅವರು ಯಾವ ಉದ್ದೇಶಕ್ಕಾಗಿ ಜಿಲ್ಲೆಯಾಗಬೇಕೆಂದು ಧ್ವನಿ ಎತ್ತುತ್ತಿದ್ದಾರೋ ಗೊತ್ತಿಲ್ಲ. ಆದರೆ, ಜಿಲ್ಲೆಯಾದರೆ ಪಶ್ಚಿಮ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಯಾಗುತ್ತದೆ. ಇದರ ಪರವಾಗಿ ಯಾರು ಬಲವಾಗಿ ಧ್ವನಿ ಎತ್ತುತ್ತಾರೋ ಅಂತಹವರಿಗೆ ಚುನಾವಣೆಯಲ್ಲಿ ಬೆಂಬಲಿಸಲಾಗುವುದು’ ಎಂದು ಹೇಳಿದರು.

‘ವಿಜಯನಗರ ರಾಜ್ಯದ ಎರಡನೇ ರಾಜಧಾನಿಯಾಗಬೇಕು ಎಂದು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್‌ ವರ್ಷಗಳ ಹಿಂದೆ ಹೇಳಿದ್ದರು. ಹೀಗಿರುವಾಗ ಬಳ್ಳಾರಿಯವರು ನೂತನ ಜಿಲ್ಲೆಗೆ ವಿರೋಧ ಸೂಚಿಸುತ್ತಿರುವುದು ಸರಿಯಲ್ಲ. ದರೂರು ಪುರುಷೋತ್ತಮಗೌಡ ಅವರು ದುಡ್ಡಿಗಾಗಿ ಹೂಳಿನ ಜಾತ್ರೆ ನಡೆಸಿದ್ದರು. ಅವರನ್ನು ರೈತ ಸಂಘದಿಂದ ಹೊರಹಾಕಲಾಗಿದೆ. ಅವರಿಗೆ ಜಿಲ್ಲೆ ವಿರೋಧಿಸುವ ನೈತಿಕತೆ ಇಲ್ಲ. ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಅವರನ್ನು ಹಗುರ ಶಬ್ದಗಳಲ್ಲಿ ನಿಂದಿಸಿರುವ ಶಾಸಕ ಜಿ. ಕರುಣಾಕರ ರೆಡ್ಡಿ ಅವರ ಹೇಳಿಕೆ ಖಂಡನಾರ್ಹ’ ಎಂದರು.

‘ಒಂದುವೇಳೆ ಅಖಂಡ ಬಳ್ಳಾರಿ ಜಿಲ್ಲೆ ವಿಭಜಿಸಬಾರದು ಎಂದರೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗಳನ್ನು ಹೊಸಪೇಟೆಗೆ ಸ್ಥಳಾಂತರಿಸಬೇಕು. ನೂತನ ಜಿಲ್ಲೆಗೆ ಸಂಬಂಧಿಸಿದಂತೆ ಹೋರಾಟದ ರೂಪುರೇಷೆ ನಿರ್ಧರಿಸಲು ಅ. 6ರಂದು ನಗರದಲ್ಲಿ ಸಭೆ ಕರೆಯಲಾಗಿದೆ. ಆ ಸಭೆಗೆ ಎಲ್ಲ ಜನಪ್ರತಿನಿಧಿಗಳು, ಎಲ್ಲ ಪಕ್ಷದ ಮುಖಂಡರು, ಸಂಘ ಸಂಸ್ಥೆಗಳವರನ್ನು ಆಹ್ವಾನಿಸಲಾಗುವುದು. ಅ. 25ರಂದು ತಾಲ್ಲೂಕಿನ ಹಂಪಿಯಿಂದ ನಗರದ ವರೆಗೆ ಜಾಥಾ ನಡೆಸಲಾಗುವುದು’ ಎಂದು ಹೇಳಿದರು.

ಮುಖಂಡರಾದ ಗುಜ್ಜಲ್‌ ನಾಗರಾಜ್‌, ನಿಂಬಗಲ್‌ ರಾಮಕೃಷ್ಣ, ದುರುಗಪ್ಪ ಪೂಜಾರ,ವಿನಾಯಕ ಶೆಟ್ಟರ್, ಪಿ.ವಿ.ವೇಂಕಟೇಶ್, ಗುಜ್ಜಲ ಗಣೇಶ್, ಕಲಂದರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.