ಪ್ರಾತಿನಿಧಿಕ ಚಿತ್ರ
ಬಳ್ಳಾರಿ: ಮೇ ಮತ್ತು ಜೂನ್ ತಿಂಗಳಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ–2ರಲ್ಲಿ ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷಾ ಅವ್ಯವಹಾರ ನಡೆದಿರುವುದನ್ನು ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ’ ಪತ್ತೆಹಚ್ಚಿದ್ದು, ವಿಚಾರಣೆ ಆರಂಭಿಸಿದೆ.
ಈ ಸಂಬಂಧ ಬಳ್ಳಾರಿ ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ, ಬಳ್ಳಾರಿಯ ಕಂಬಳಿ ಬಜಾರ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ, ಎಸ್‌ಯುಜೆಎಸ್ ಪ್ರೌಢಶಾಲೆಯ ಸಹಶಿಕ್ಷಕ, ಅಂದ್ರಾಳ್ ಸರ್ಕಾರಿ ಶಾಲೆಯ ಸಹಶಿಕ್ಷಕ, ಮಿಂಚೇರಿ ಸರ್ಕಾರಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರು, ಕಂಬಳಿ ಬಜಾರ್ ಶಾಲೆಯ ಸಮೂಹ ಸಂಪನ್ಮೂಲ ವ್ಯಕ್ತಿ ಮತ್ತು ಸಂಬಂಧಿಸಿದ ವಿದ್ಯಾರ್ಥಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಜುಲೈ 1ರಂದು ವಿಚಾರಣೆಯನ್ನೂ ನಡೆಸಲಾಗಿದೆ.
ಮಂಡಳಿಯ ಕಾರ್ಯದರ್ಶಿಯ ಸಮ್ಮುಖದಲ್ಲಿ ಅಧಿಕಾರಿ, ಶಿಕ್ಷಕರು ಮತ್ತು ಮೂವರು ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಿರುವುದಾಗಿ ಗೊತ್ತಾಗಿದೆ.
ವಿಚಾರಣೆಗೆ ಬಳ್ಳಾರಿ ತಾಲ್ಲೂಕಿನ ಪರೀಕ್ಷೆ–1 ಮತ್ತು 2ಗೆ ಸಂಬಂಧಿಸಿದ ಪರೀಕ್ಷಾ ಮುಖ್ಯ ಅಧೀಕ್ಷರು, ಅಭಿರಕ್ಷಕರು, ಕೊಠಡಿ ಮೇಲ್ವಿಚಾರಕರು, ಜಾಗೃತ ದಳದ ಸಿಬ್ಬಂದಿಯ ಪಟ್ಟಿಯನ್ನು ತರಲು ಸೂಚಿಸಲಾಗಿದೆ. ಜತೆಗೆ, 275ಟಿಟಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಎರಡೂ ಪರೀಕ್ಷೆಗಳಿಗೆ ನಿಯೋಜಿಸಿರುವ ಎಲ್ಲ ಅಧಿಕಾರಿ, ಸಿಬ್ಬಂದಿಯ ಪಟ್ಟಿ, ಸಿಆರ್‌ಪಿ, ಬಿಆರ್‌ಪಿಗಳ ಪಟ್ಟಿಯನ್ನೂ ನೀಡಲು ತಿಳಿಸಲಾಗಿತ್ತು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ – 2 ನಡೆದಿದ್ದ 275ಟಿಟಿ ಪರೀಕ್ಷಾ ಕೇಂದ್ರದ ನಿರ್ದಿಷ್ಟ ಮೂರು ನೋಂದಣಿ ಸಂಖ್ಯೆಯ ವಿದ್ಯಾರ್ಥಿಗಳಿಗೆ 31ಇ ಆಂಗ್ಲ ವಿಷಯದ ಉತ್ತರ ಪತ್ರಿಕೆ ಬುಕ್‌ಲೆಟ್ ಬದಲಿಗೆ ಗಣಿತ ವಿಷಯದ ಬುಕ್‌ಲೆಟ್‌ನಲ್ಲಿ ಪರೀಕ್ಷೆ ಬರೆಸಲಾಗಿದೆ.
ಮೂರೂ ಉತ್ತರ ಪತ್ರಿಕೆಗಳಲ್ಲಿ ಒಂದೇ ರೀತಿಯ ಉತ್ತರ, ಒಂದೇ ರೀತಿಯ ತಪ್ಪುಗಳನ್ನು ಬರೆಯಲಾಗಿದೆ. ಬೆಂಗಳೂರಿನ ಆರ್‌ವಿ ಬಾಲಕಿಯ ಪ್ರೌಢಶಾಲೆಯಲ್ಲಿ ಮೌಲ್ಯ ಮಾಪನ ನಡೆಯುವ ಸಂದರ್ಭದಲ್ಲಿ ಈ ವಿಷಯ ಗೊತ್ತಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಅವ್ಯವಹಾರ ನಡೆದಿರುವುದು ಕಂಡು ಬಂದಿರುವುದಾಗಿ ಜಂಟಿ ಮೌಲ್ಯಮಾಪಕರು ಮಂಡಳಿಗೆ ವರದಿ ಮಾಡಿದ್ದಾರೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಇಂಥ ಪರೀಕ್ಷಾ ಅವ್ಯಹಾರವನ್ನು ಮಂಡಳಿಯೇ ನೇರವಾಗಿ ವಿಚಾರಣೆ ನಡೆಸಿ, ಶಿಕ್ಷೆಯನ್ನೂ ವಿಧಿಸುತ್ತದೆ. ಈಗ ನನಗೆ ವಿಷಯ ಗಮನಕ್ಕೆ ಬಂದಿದ್ದು, ಸಂಬಂಧಿಸಿದವರಿಂದ ಸ್ಪಷ್ಟನೆ ಪಡೆಯುತ್ತೇನೆಉಮಾದೇವಿ, ಡಿಡಿಪಿಐ, ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.