ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ ದಾಖಲೆಯ ಪತನ

ರಾಜ್ಯದಲ್ಲೇ ಹೂವಿನಹಡಗಲಿಗೆ ಕೊನೆಯ ಸ್ಥಾನ

ಕೆ.ಸೋಮಶೇಖರ
Published 1 ಮೇ 2019, 19:45 IST
Last Updated 1 ಮೇ 2019, 19:45 IST

ಹೂವಿನಹಡಗಲಿ: 2018–19ನೇ ಶೈಕ್ಷಣಿಕ ಸಾಲಿನ ತಾಲ್ಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ದಾಖಲೆಯ ಪತನ ಕಂಡಿದೆ. ತಾಲ್ಲೂಕಿನಲ್ಲಿ ಶೇ 40.01ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷಾ ಇತಿಹಾಸದಲ್ಲೇ ಇದು ಅತ್ಯಂತ ಕಳಪೆ ಫಲಿತಾಂಶವಾಗಿದೆ.

ತಾಲ್ಲೂಕಿನಲ್ಲಿ ಪರೀಕ್ಷೆ ಬರೆದ 2,674 ವಿದ್ಯಾರ್ಥಿಗಳಲ್ಲಿ 1,070 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರತಿವರ್ಷ ಬಳ್ಳಾರಿ ಜಿಲ್ಲೆಯಲ್ಲಿ ಗುಣಾತ್ಮಕ ಫಲಿತಾಂಶ ಪಡೆಯುವ ತಾಲ್ಲೂಕುಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಹೂವಿನಹಡಗಲಿ ಈ ಬಾರಿ ರಾಜ್ಯದಲ್ಲೇ ಕೊನೆಯ ಸ್ಥಾನಕ್ಕೆ ಕುಸಿದಿದೆ. ತಾಲ್ಲೂಕಿನ ಶೈಕ್ಷಣಿಕ ಗುಣಮಟ್ಟ ತೀರಾ ಅಧೋಗತಿಗೆ ಕುಸಿಯಲು ಕಾರಣ ಏನು ಎಂಬುದನ್ನು ಶಿಕ್ಷಣ ಇಲಾಖೆ ಕಂಡು ಹಿಡಿಯಬೇಕಿದೆ.

ತಾಲ್ಲೂಕಿನ ಬಹುತೇಕ ಸರ್ಕಾರಿ ಶಾಲೆಗಳಿಗೆ ಶೇ 30 ರಿಂದ 40ರಷ್ಟು ಫಲಿತಾಂಶ ಲಭಿಸಿದೆ. ಪ್ರತಿ ವರ್ಷ ಐದಾರು ಶಾಲೆಗಳಾದರೂ ಶೇ 100ರಷ್ಟು ಫಲಿತಾಂಶ ಪಡೆಯುತ್ತಿದ್ದವು. ಈ ಬಾರಿ 97ರಷ್ಟು ಫಲಿತಾಂಶ ಪಡೆದ ಮದಲಗಟ್ಟಿ ಮೊರಾರ್ಜಿ ಶಾಲೆಯದ್ದೇ ಅಗ್ರ ಸಾಧನೆಯಾಗಿದೆ.

ADVERTISEMENT

ಪರೀಕ್ಷಾ ವ್ಯವಸ್ಥೆಯನ್ನು ನಕಲು ಮುಕ್ತಗೊಳಿಸಲು ಈ ಬಾರಿ ಶಿಕ್ಷಣ ಇಲಾಖೆ ಅತಿಯಾದ ಬಿಗಿ ಕ್ರಮಗಳನ್ನು ಕೈಗೊಂಡಿದ್ದು, ಫಲಿತಾಂಶ ಕುಸಿಯಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಶೈಕ್ಷಣಿಕ ವರ್ಷದ ಆರಂಭದಿಂದಲೇ ಗುಣಾತ್ಮಕ ಫಲಿತಾಂಶಕ್ಕೆ ಯೋಜನೆ ರೂಪಿಸುವ ಬದಲು ಪರೀಕ್ಷೆಯ ಹೊಸ್ತಿಲಲ್ಲಿ ಅಧಿಕಾರಿಗಳು ಬಿಗಿ ಕ್ರಮಗಳನ್ನು ಅನುಸರಿಸಿದ್ದು ಕಾರಣ ಎಂದು ಕೆಲವರು ದೂರಿದ್ದಾರೆ.

ಪರೀಕ್ಷೆಗಳನ್ನು ನಕಲು ಮುಕ್ತ, ಪಾರದರ್ಶಕವಾಗಿ ನಡೆಸಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪರೀಕ್ಷಾ ಕೇಂದ್ರಗಳಿಗೆ ಸಿ.ಸಿ.ಟಿ.ವಿ. ಕ್ಯಾಮೆರಾ ಕಣ್ಗಾವಲು ಇರಿಸುವ ಜತೆಗೆ ಜಾಗೃತ ದಳ, ಸ್ಥಾನಿಕ ಜಾಗೃತ ದಳ ನೇಮಿಸುತ್ತಿದೆ. ಆದರೆ, ಪರೀಕ್ಷಾ ಮಂಡಳಿಯ ಮಾರ್ಗಸೂಚಿಗಳನ್ನೂ ಮೀರಿ ತಾಲ್ಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ನಿಗಾ ವ್ಯವಸ್ಥೆ ಮಾಡಲಾಗಿತ್ತು. ‘ಪರೀಕ್ಷಾ ಕೊಠಡಿಗಳಲ್ಲಿ ನೆಮ್ಮದಿಗಿಂತ ಭಯ ವಾತಾವರಣವೇ ಹೆಚ್ಚಾಗಿತ್ತು. ಯಾರ ಪ್ರತಿಷ್ಠೆಗಾಗಿ ಅಧಿಕಾರಿಗಳು ಈಗೆಲ್ಲಾ ಕ್ರಮ ಕೈಗೊಂಡರು’ ಎಂದು ಶಿಕ್ಷಕರು ಪ್ರಶ್ನಿಸಿದ್ದಾರೆ.

‘ಈ ಬಾರಿಯ ಪರೀಕ್ಷಾ ಕ್ರಮದಿಂದ ಫಲಿತಾಂಶ ಕುಸಿದಿರಬಹುದು. ಆದರೆ, ಗುಣಮಟ್ಟದ ಫಲಿತಾಂಶ ಹೊರ ಬಂದಿದೆ’ ಎಂದು ಶಿಕ್ಷಣ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಪರೀಕ್ಷಾ ಕೇಂದ್ರದ ಒಳಗೆ ನಕಲಿಗೆ ಅವಕಾಶ ನೀಡುವುದರಿಂದ ಫಲಿತಾಂಶ ಹೆಚ್ಚಳವಾಗಬಹುದು. ಆದರೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇದೂ ಕೂಡ ಶೈಕ್ಷಣಿಕ ಗುಣಮಟ್ಟ ಕುಸಿಯಲು ಪ್ರಮುಖ ಕಾರಣ’ ಎಂದು ಹೇಳುತ್ತಿದ್ದಾರೆ.

ಫಲಿತಾಂಶ ಕುಸಿಯಲು ಇನ್ನೂ ನಾನಾ ಕಾರಣಗಳಿವೆ ಎಂದು ಕೆಲವರು ಹೇಳುತ್ತಿದ್ದಾರೆ. ‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿಕ್ಷಕ ವರ್ಗ ಮತ್ತು ನೌಕರರು ಅಭ್ಯರ್ಥಿಯೊಬ್ಬರ ಬೆಂಬಲಕ್ಕೆ ನಿಂತಿದ್ದರು ಎಂಬ ಕಾರಣಕ್ಕೆ ಅವರ ಮೇಲೆ ನಿಯಂತ್ರಣ ಸಾಧಿಸಲು ಬಿಗಿ ಕ್ರಮಗಳ ಅಸ್ತ್ರಗಳನ್ನು ಪ್ರಯೋಗಿಸಲಾಗುತ್ತಿದೆ’ ಎಂಬ ಮಾತು ಶಿಕ್ಷಕರ ವಲಯದಲ್ಲಿ ಕೇಳಿ ಬರುತ್ತಿದೆ.

‘ಪರೀಕ್ಷೆಯ ಹೊಸ್ತಿಲಲ್ಲಿ ಗುಣಾತ್ಮಕ ಫಲಿತಾಂಶಕ್ಕೆ ಪ್ರಯತ್ನಿಸುವ ಬದಲು ಶೈಕ್ಷಣಿಕ ವರ್ಷದ ಆರಂಭದಿಂದಲೇ ಪರಿಣಾಮಕಾರಿ ಬೋಧನೆ, ಮೂಲಸೌಕರ್ಯ ವ್ಯವಸ್ಥೆಯನ್ನು ಕಲ್ಪಿಸಿ ಫಲಿತಾಶ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಶಿಕ್ಷಣ ಪ್ರೇಮಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.