ADVERTISEMENT

ಸೂರ್ಯಾಸ್ತ ವೀಕ್ಷಣೆಗೆ ತಪ್ಪಿದ ಹೆಣಗಾಟ

ಹಂಪಿ ಹೇಮಕೂಟ ಪರ್ವತದಲ್ಲಿ ಕಲ್ಲಿನ ಆಸನಗಳ ವ್ಯವಸ್ಥೆ; ಸ್ಮಾರಕಕ್ಕೆ ಚ್ಯುತಿ ಆಗದಂತೆ ಕ್ರಮ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 4 ಡಿಸೆಂಬರ್ 2018, 13:30 IST
Last Updated 4 ಡಿಸೆಂಬರ್ 2018, 13:30 IST
ಕಲ್ಲಿನ ಆಸನಗಳನ್ನು ಹಾಕುವುದಕ್ಕೂ ಮೊದಲು ಹೇಮಕೂಟದ ಬಂಡೆಗಲ್ಲುಗಳ ಮೇಲೆ ಕುಳಿತುಕೊಂಡು ಸೂರ್ಯಾಸ್ತ ವೀಕ್ಷಿಸುತ್ತಿದ್ದ ಪ್ರವಾಸಿಗರು
ಕಲ್ಲಿನ ಆಸನಗಳನ್ನು ಹಾಕುವುದಕ್ಕೂ ಮೊದಲು ಹೇಮಕೂಟದ ಬಂಡೆಗಲ್ಲುಗಳ ಮೇಲೆ ಕುಳಿತುಕೊಂಡು ಸೂರ್ಯಾಸ್ತ ವೀಕ್ಷಿಸುತ್ತಿದ್ದ ಪ್ರವಾಸಿಗರು   

ಹೊಸಪೇಟೆ: ಇಲ್ಲಿನ ಹಂಪಿ ಹೇಮಕೂಟ ಪರ್ವತದಲ್ಲಿ ಕಲ್ಲಿನ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರವಾಸಿಗರು ಕುಳಿತುಕೊಂಡು ಸೂರ್ಯಾಸ್ತದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಹಂಪಿಯ ಪ್ರಮುಖ ಸ್ಮಾರಕಗಳಲ್ಲಿ ಹೇಮಕೂಟ ಕೂಡ ಒಂದಾಗಿದೆ. ಹೇಮಕೂಟಕ್ಕೆ ಹೋದರೆ ಇಡೀ ಹಂಪಿಯ ಪರಿಸರವನ್ನು ನೋಡಬಹುದು. ಅಲ್ಲಿರುವ ಜೈನ ಮಂಟಪಗಳು ಅದರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ. ಸೂರ್ಯಾಸ್ತ ವೀಕ್ಷಣೆಗೆ ಇದು ಹೇಳಿ ಮಾಡಿಸಿದ ಸ್ಥಳ. ಪ್ರಶಾಂತವಾದ ಸ್ಥಳದಲ್ಲಿ ಕುಳಿತುಕೊಂಡು ಸೂರ್ಯಾಸ್ತ ನೋಡಲು ಕೆಲವರು ಬಂದರೆ, ಮತ್ತೆ ಕೆಲವರು ಛಾಯಾಗ್ರಹಣಕ್ಕೆ ಬರುತ್ತಾರೆ.

ದಿನವಿಡೀ ಹಂಪಿಯ ಪರಿಸರದಲ್ಲಿ ಸುತ್ತಾಡುವ ಪ್ರವಾಸಿಗರು ಸಂಜೆಯಾಗುತ್ತಲೇ ಹೇಮಕೂಟದತ್ತ ಮುಖ ಮಾಡುತ್ತಾರೆ. ಸೂರ್ಯಾಸ್ತದ ಹೊತ್ತಿನಲ್ಲಿ ಜನಜಾತ್ರೆ ಇರುತ್ತದೆ. ಆದರೆ, ಇಡೀ ಪರಿಸರದಲ್ಲಿ ಎಲ್ಲಿಯೂ ಪ್ರವಾಸಿಗರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇರಲಿಲ್ಲ. ಕೆಲವರು ಮಂಟಪ, ಬಂಡೆಗಲ್ಲುಗಳನ್ನು ಹತ್ತಿಕೊಂಡು ನೋಡಿದರೆ, ಕೆಲವರು ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದರು. ಪ್ರವಾಸಿಗರಿಗೆ ಆಗುತ್ತಿದ್ದ ಅನಾನುಕೂಲವನ್ನು ಮನಗಂಡು, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್‌.ಐ.) ಹಂಪಿ ವೃತ್ತವು, ಹೇಮಕೂಟದ ಅಂಚಿನಲ್ಲಿ ಕಲ್ಲಿನ ಆಸನಗಳ ವ್ಯವಸ್ಥೆ ಮಾಡಿದೆ. ಇದರಿಂದ ಪ್ರವಾಸಿಗರು ಕುಳಿತುಕೊಂಡು, ಸೂರ್ಯಾಸ್ತದ ನಯನ ಮನೋಹರ ದೃಶ್ಯವನ್ನು ನೋಡುವಂತಾಗಿದೆ.

ADVERTISEMENT

ಎ.ಎಸ್‌.ಐ. ಕ್ರಮಕ್ಕೆ ಪ್ರವಾಸಿಗರು, ಸ್ಥಳೀಯ ಮಾರ್ಗದರ್ಶಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ‘ಹಂಪಿಗೆ ಯಾರೇ ಭೇಟಿ ಕೊಡಲಿ ಸೂರ್ಯಾಸ್ತ ನೋಡದೇ ಹೋಗರು. ಅಂತಹ ಅಪರೂಪದ ಸ್ಥಳವದು. ಅಲ್ಲಿ ಪ್ರವಾಸಿಗರಿಗೆ ಆಗುತ್ತಿದ್ದ ಅನಾನುಕೂಲವನ್ನು ಎ.ಎಸ್‌.ಐ. ದೂರ ಮಾಡಿರುವುದು ಒಳ್ಳೆಯ ಕ್ರಮ. ಇದರಿಂದ ಮತ್ತಷ್ಟು ಪ್ರವಾಸಿಗರು ಬರಲು ಸಹಾಯವಾಗುತ್ತದೆ’ ಎನ್ನುತ್ತಾರೆ ಗೈಡ್‌ ಗೋಪಾಲ.

‘ಹಂಪಿ ಬಹಳ ಸುಂದರವಾದ ಪ್ರವಾಸಿ ತಾಣ. ಅದರಲ್ಲೂ ಹೇಮಕೂಟ ನೋಡಲು ಎರಡು ಕಣ್ಣುಗಳು ಸಾಲದು. ಅಷ್ಟೊಂದು ಸುಂದರವಾದ ಸ್ಥಳದಲ್ಲಿ ಪ್ರವಾಸಿಗರಿಗಾಗಿ ಕಲ್ಲಿನ ಆಸನಗಳ ವ್ಯವಸ್ಥೆ ಮಾಡಿರುವುದು ಒಳ್ಳೆಯ ಸಂಗತಿ. ಸ್ಮಾರಕಗಳಿಗೆ ಚ್ಯುತಿ ಆಗದಂತೆ ಆಸನಗಳನ್ನು ನಿರ್ಮಿಸಿರುವುದು ಒಳ್ಳೆಯ ಆಲೋಚನೆ’ ಎಂದು ಬ್ರಿಟನ್‌ ಪ್ರಜೆ ಜಾನ್‌ ತಿಳಿಸಿದರು.

ವಿರೂಪಾಕ್ಷೇಶ್ವರ ದೇವಸ್ಥಾನ, ಕೃಷ್ಣ ದೇಗುಲ, ರಾಣಿ ಸ್ನಾನಗೃಹ ಬಳಿಯೂ ಕಲ್ಲಿನ ಆಸನಗಳನ್ನು ಸ್ಥಾಪಿಸಲಾಗಿದೆ. ಬಿಸಿಲಿನಲ್ಲಿ ಸ್ಮಾರಕಗಳ ವೀಕ್ಷಣೆಗೆ ನಡೆದು, ದಣಿಯುವ ಪ್ರವಾಸಿಗರು ಕೆಲಕಾಲ ವಿಶ್ರಾಂತಿ ಪಡೆಯಲು ಅನುಕೂಲವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.