ಕುರುಗೋಡು: ಸರ್ಕಾರದ ಹೆಸರಿನಲ್ಲಿರುವ ರೂಪ ಕಳೆದುಕೊಂಡ ಮಲ್ಲಪ್ಪನ ಕೆರೆ ಭೂಮಿಯಲ್ಲಿ ಕೃಷಿ ಮಾಡದಂತೆ ಎಚ್ಚರಿಕೆ ನಾಮಫಲಕ ಹಾಕಿರುವುದನ್ನು ವಿರೋಧಿಸಿ ಸಾಗುವಳಿದಾರರು ಬುಧವಾರದಿಂದ ಜಮೀನಿನಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಈ ಕ್ರಮದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಸಂತ್ರಸ್ಥ ಸಾಗುವಳಿದಾರರು ಮಾತನಾಡಿ, ಮೂಲರೂಪ ಕಳೆದುಕೊಂಡ ಕೆರೆ ಜಮೀನಿನಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡದ ಬಡ ಕೃಷಿ ಕಾರ್ಮಿಕ ಕುಟುಂಬಗಳು 50 ವರ್ಷಗಳಿಂದ ಸಾಗುವಳಿಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಏಕಾಏಕಿ ಕೃಷಿ ಮಾಡದಂತೆ ನಿಷೇಧ ಏರಿ ಬಡವರ ಹೊಟ್ಟೆಗೆ ಪೆಟ್ಟುನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕು ಕಚೇರಿ ಎದುರು 150 ದಿನಗಳ ಕಾಲ ನಿರತಂರ ಧರಣಿ ನಡೆಸಿದ ಸಂದರ್ಭದಲ್ಲಿ ಧರಣಿಸ್ಥಳಕ್ಕೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ ಧರಣಿ ಹಿಂದಕ್ಕೆ ಪಡೆಯಿರಿ. ನಿಮ್ಮ ಪರವಾಗಿ ಸರ್ಕಾರಕ್ಕೆ ವರದಿ ನೀಡುವುದಾಗಿ ಭರವಸೆ ನೀಡಿದ್ದರು.
ಬಡ ರೈತರನ್ನು ಒಕ್ಕಲೆಬ್ಬಿಸುವ ಮೂಲಕ ಬೆನ್ನಿಗೆ ಚೂರಿಹಾಕುವ ಕೆಲಸಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಡ ರೈತರ ಬರ ನಿಲ್ಲದಿದ್ದರೆ ಮುಂದಿನದಿನಗಳಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡರಾದ ಗಾಳಿ ಬಸವರಾಜ, ವಿ.ಎಸ್.ಶಿವಶಂಕರ್, ಮೇಲ್ಗಿರಿ ಭೀಮಯ್ಯ, ಟಿ.ಅಂಬಣ್ಣ, ಹುಲೆಪ್ಪ, ಎಂ.ರುದ್ರಪ್ಪ, ದೊಡ್ಡ ಕೊಮಾರೆಪ್ಪ, ರಂಗಪ್ಪ, ಶಂಕ್ರಪ್ಪ, ಗೂಳಪ್ಪ, ರಾಮಣ್ಣ, ಕರಿಕೆಂಚಪ್ಪ, ಬಸವರಾಜ, ಹುಲುಗಪ್ಪ, ನಾಗಪ್ಪ, ಪಕ್ಕೀರಪ್ಪ ಮತ್ತು ಪೂಜಾರಿ ಕೊಂಚಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.