ADVERTISEMENT

ಮಕ್ಕಳಿಗೆ ಸಿಗುತ್ತಿಲ್ಲ ‘ಮಧ್ಯಾಹ್ನದ ಬಿಸಿಯೂಟ’

ಅಸಮರ್ಪಕ ಪೂರೈಕೆ; ಖಾಲಿ ಹೊಟ್ಟೆಯಲ್ಲೇ ಪಾಠ ಕೇಳುತ್ತಿರುವ ಮಕ್ಕಳು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 28 ಜೂನ್ 2022, 8:54 IST
Last Updated 28 ಜೂನ್ 2022, 8:54 IST
ಹೊಸಪೇಟೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಬಡಿಸುತ್ತಿರುವುದು
ಹೊಸಪೇಟೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಬಡಿಸುತ್ತಿರುವುದು   

ಹೊಸಪೇಟೆ (ವಿಜಯನಗರ): ಅಸಮರ್ಪಕ ಪೂರೈಕೆಯಿಂದ ಅನೇಕ ಶಾಲಾ ಮಕ್ಕಳಿಗೆ ‘ಮಧ್ಯಾಹ್ನದ ಬಿಸಿಯೂಟ’ ಸಿಗುತ್ತಿಲ್ಲ.

ಜಿಲ್ಲೆಯ ಶೇ 75ಕ್ಕೂ ಹೆಚ್ಚಿನ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಇಸ್ಕಾನ್‌ನಿಂದ ಮಧ್ಯಾಹ್ನದ ಬಿಸಿಯೂಟ ಪೂರೈಸಲಾಗುತ್ತದೆ. ಇನ್ನುಳಿದ ಶೇ 25ರಷ್ಟು ಶಾಲೆಗಳು ಸ್ವಂತ ಅಡುಗೆ ಮನೆಗಳನ್ನು ಹೊಂದಿದ್ದು, ಅಲ್ಲಿಯೇ ಆಹಾರ ತಯಾರಿಸಲಾಗುತ್ತದೆ. ಆದರೆ, ಎರಡೂ ಕಡೆ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಆಹಾರ ಪೂರೈಸುತ್ತಿಲ್ಲ. ಇದರಿಂದಾಗಿ ಅನೇಕ ಮಕ್ಕಳು ಮಧ್ಯಾಹ್ನದ ಬಿಸಿಯೂಟದಿಂದ ವಂಚಿತರಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಆಯಾ ಶಾಲೆಯ ಪ್ರಾಂಶುಪಾಲರು ಇಸ್ಕಾನ್‌ನವರಿಗೆ ಒಟ್ಟು ಮಕ್ಕಳ ಸಂಖ್ಯೆ ತಿಳಿಸಿದರೆ ಅದಕ್ಕನುಗುಣವಾಗಿ ಅವರು ಆಹಾರ ಪೂರೈಸುತ್ತಾರೆ. ಆದರೆ, ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಕೆಲವೊಮ್ಮೆ ಕಮ್ಮಿ ಆಗುತ್ತದೆ. ಅಂತಹ ಸಂದರ್ಭದಲ್ಲಿ ಆಹಾರ ಕಸದ ತೊಟ್ಟಿ ಸೇರುತ್ತದೆ. ಇದನ್ನೇ ನೆಪವಾಗಿಟ್ಟುಕೊಂಡು ಕೆಲ ಶಾಲೆಯ ಪ್ರಾಂಶುಪಾಲರು ನಿತ್ಯ ಕಡಿಮೆ ಪ್ರಮಾಣದಲ್ಲಿ ಆಹಾರಕ್ಕೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಇದರಿಂದಾಗಿ ಅನೇಕ ವಿದ್ಯಾರ್ಥಿಗಳು ಊಟವಿಲ್ಲದೇ, ಸಂಜೆ ವರೆಗೆ ತರಗತಿಗಳಲ್ಲಿ ಕುಳಿತು ಖಾಲಿ ಹೊಟ್ಟೆಯಿಂದ ಮನೆಗಳಿಗೆ ಮರಳುವ ಪರಿಸ್ಥಿತಿ ಉದ್ಭವವಾಗಿದೆ.

ADVERTISEMENT

ಇಸ್ಕಾನ್‌ನಿಂದ ಆಹಾರ ಬಂದ ನಂತರ ಶಾಲೆಯ ಒಂದಿಬ್ಬರು ಶಿಕ್ಷಕರು, ಆಹಾರ ಸೇವಿಸುವ ಮೂಲಕ ಅದನ್ನು ಪರೀಕ್ಷಿಸುತ್ತಾರೆ. ಬಳಿಕ ಮಕ್ಕಳಿಗೆ ಪೂರೈಸಲಾಗುತ್ತದೆ. ಎಲ್ಲ ಮಕ್ಕಳಿಗೆ ಸಮರ್ಪಕವಾಗಿ ಆಹಾರ ಕೊಟ್ಟ ನಂತರ ಶಿಕ್ಷಕರು ಊಟ ಮಾಡುತ್ತಾರೆ. ಆದರೆ, ಕೆಲವು ಶಾಲೆಗಳಲ್ಲಿ 15ರಿಂದ 20ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಶಿಕ್ಷಕರೇ ಮೊದಲು ಊಟ ಮಾಡುತ್ತಿದ್ದಾರೆ. ಅನಂತರ ಆಹಾರದ ಕೊರತೆಯಾಗಿ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ವಿದ್ಯಾರ್ಥಿಗಳ ಹಿತಕ್ಕಿಂತ ತಮ್ಮ ಹಿತವೇ ಶಿಕ್ಷಕರಿಗೆ ಮುಖ್ಯವಾಗಿದೆ ಎನ್ನುವುದು ವಿದ್ಯಾರ್ಥಿಗಳ ಆರೋಪ.

ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯೊಂದರಲ್ಲೇ ಸಾವಿರದ ಸನಿಹ ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಅಲ್ಲಿ ನಿತ್ಯ 30ರಿಂದ 40 ವಿದ್ಯಾರ್ಥಿನಿಯರಿಗೆ ಆಹಾರವೇ ಸಿಗುತ್ತಿಲ್ಲ. ಕೆಲವೊಮ್ಮೆ ಈ ಸಂಖ್ಯೆ ಹೆಚ್ಚಾಗುವುದರಿಂದ ಎಲ್ಲರಿಗೂ ಅಲ್ಪಸ್ವಲ್ಪ ಬಡಿಸಿ ಕೈತೊಳೆದುಕೊಳ್ಳುತ್ತಾರೆ. ಇದು ಅವಳಿ ಜಿಲ್ಲೆಗಳ ಕೆಲವು ಶಾಲೆಗಳಲ್ಲಿ ದಿನನಿತ್ಯದ ಗೋಳಾಗಿದೆ.

‘ಕೆಲವು ದಿನಗಳಿಂದ ನಮ್ಮ ಶಾಲೆಗೆ ಸರಿಯಾದ ಪ್ರಮಾಣದಲ್ಲಿ ಆಹಾರ ಪೂರೈಸುತ್ತಿಲ್ಲ. ನಿತ್ಯ ಸುಮಾರು ವಿದ್ಯಾರ್ಥಿಗಳಿಗೆ ಆಹಾರ ಸಿಗುತ್ತಿಲ್ಲ. ನಮ್ಮಲ್ಲಿ ಅನೇಕರು ಹಳ್ಳಿಯಿಂದ ಬರುತ್ತೇವೆ. ಕೃಷಿ ಕುಟುಂಬದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. ನಮಗೆ ಶಾಲೆಗೆ ಕಳುಹಿಸುತ್ತಿರುವುದೇ ದೊಡ್ಡ ವಿಚಾರ. ಈ ರೀತಿ ಖಾಲಿ ಹೊಟ್ಟೆಯಿಂದ ಓದಲು ಆಗುವುದಿಲ್ಲ. ತರಗತಿ ಮುಗಿಸಿಕೊಂಡು ಊರು ಸೇರಿದಾಗ ಕತ್ತಲಾಗುತ್ತದೆ. ನಿಶ್ಶಕ್ತಿ ಆವರಿಸಿಕೊಳ್ಳುತ್ತಿದೆ ಮಕ್ಕಳನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಎಷ್ಟು ಸರಿ? ಸಂಬಂಧಿಸಿದವರು ಗಮನ ಹರಿಸಬೇಕು’ ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದರು.

ಇನ್ನು, ಸರ್ಕಾರದಿಂದ ಅಕ್ಕಿ, ಬೇಳೆ ಕಾಳು ಪೂರೈಸಲು ವಿಳಂಬವಾಗಿದ್ದರಿಂದ ಹೊಸಪೇಟೆ, ಕಂಪ್ಲಿ ಭಾಗದ ಅನೇಕ ಶಾಲೆಗಳಲ್ಲಿ ಕೆಲವು ದಿನಗಳಿಂದ ಆಹಾರವೇ ತಯಾರಿಸಿಲ್ಲ ಎಂದು ಗೊತ್ತಾಗಿದೆ. ವಿದ್ಯಾರ್ಥಿಗಳು ಪ್ರಶ್ನಿಸಿದರೆ, ನಮಗೆ ಆಹಾರ ಧಾನ್ಯವೇ ಸರಬರಾಜು ಆಗಿಲ್ಲ ಎಂದು ತಿಳಿಸಿದ್ದಾರೆ. ಅಸಮರ್ಪಕ ಪೂರೈಕೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಬಡ ಮಕ್ಕಳೊಂದಿಗೆ ಚೆಲ್ಲಾಟ ಆಡುತ್ತಿರುವುದು ಸರಿಯಲ್ಲ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಯಾವ ಶಾಲೆಗಳಲ್ಲಿ ಆಹಾರದ ಕೊರತೆಯಾಗಿದೆಯೋ ಅಂತಹ ಶಾಲೆಗಳ ಪ್ರಾಂಶುಪಾಲರನ್ನು ಸಂಪರ್ಕಿಸಿ ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪನಮೇಶಲು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.