ಕಮಲಾಪುರ: ಪಟ್ಟಣದಲ್ಲಿ ಜ.12ರಂದು ಉಪ ಖಜಾನೆ ಕಚೇರಿ ಆರಂಭಗೊಳ್ಳಲಿದ್ದು, ತಾಲ್ಲೂಕಿನ ನೌಕರರ ಬೇಡಿಕೆ ಈಡೇರಲಿದೆ.
2020ರ ಏಪ್ರಿಲ್ 1ರಂದೇ ಉಪ ಖಜಾನೆ ಆರಂಭವಾಗಿದೆ. ಕಮಲಾಪುರದಲ್ಲಿ ಸೂಕ್ತ ವ್ಯವಸ್ಥೆ ಇರದ ಕಾರಣ ಕಲಬುರ್ಗಿ ವಿಧಾನಸೌಧದಲ್ಲಿನ ಜಿಲ್ಲಾ ಖಜಾನೆಯ ಒಂದು ಕೋಣೆಯಲ್ಲಿ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತಿತ್ತು.
ಈಗ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಖಾಸಗಿ ಕಟ್ಟಡದಲ್ಲಿ ಕಚೇರಿ ಸ್ಥಾಪಿಸಲಾಗಿದೆ. 4 ಕೋಣೆಗಳಿದ್ದು ಉಪ ಖಜಾನೆಗೆ ಬೇಕಾದ ಎಲ್ಲ ಸೌಕರ್ಯ ಒದಗಿಸಲಾಗಿದೆ. 6 ಸಿಬ್ಬಂದಿ ಹುದ್ದೆಗಳ ಪೈಕಿ ಇಬ್ಬರನ್ನು ನೇಮಿಸಲಾಗಿದೆ. ಇನ್ನುಳಿದ 4 ಹುದ್ದೆಗಳು ಖಾಲಿ ಇವೆ.
ಕಮಲಾಪುರ ತಾಲ್ಲೂಕಿನ ಎಲ್ಲ ಸರ್ಕಾರಿ ಕಚೇರಿಗಳ ಹಣಕಾಸಿನ ವ್ಯವಹಾರ ಇಲ್ಲಿ ನಡೆಯಲಿದ್ದು, ಈ ಉಪ ಖಜಾನೆ ವ್ಯಾಪ್ತಿಯಲ್ಲಿ 54 ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳ ಕೋಡ್ ಇರಲಿವೆ. ಶಿಕ್ಷಣ, ಕಂದಾಯ, ಪಂಚಾಯತ ರಾಜ್, ಪದವಿ ಕಾಲೇಜು, ಆರೋಗ್ಯ, ಪಶುಸಂಗೋಪನೆ, ಕೃಷಿ ಮತ್ತಿತರ ಇಲಾಖೆ ಸೇರಿ ಸದ್ಯ 46 ಕೋಡ್‍ಗಳು ಚಾಲ್ತಿಯಲ್ಲಿವೆ. ತಾಲ್ಲೂಕಿಗೆ ಸಂಬಂಧಿಸಿದ ಎಲ್ಲ ಕಚೇರಿಗಳು ಕಾರ್ಯಾರಂಭವಾದರೆ ಉಳಿದವು ಸಹ ಚಾಲ್ತಿಗೊಳ್ಳಲಿವೆ.
ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ, ಹಿಂಬಾಕಿ ವೇತನ, ಸಾಮೂಹಿಕ ವಿಮೆ(ಜಿಐಎಸ್), ಸಾಮಾನ್ಯ ಭವಿಷ್ಯ ನಿಧಿ(ಜಿಪಿಎಫ್) ಹಣ ಇಲ್ಲಿಯೆ ಸೆಳೆಯಬಹುದು.
ಖಜಾನೆ ಎರಡರಲ್ಲಿ ಏಪ್ರಿಲ್ 1ರಿಂದ ನಿವೃತ್ತ ನೌಕರರ ಪಿಂಚಣಿ ಆನ್‌ಲೈನ್ ಮೂಲಕ ಪಾವತಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಉಪ ಖಜಾನೆಯ ಪ್ರಭಾರಿ ಸಹಾಯಕ ಖಜಾನೆ ಅಧಿಕಾರಿ ಸಯ್ಯದ ನಸೀರ ಆಸ್ಮಿ ತಿಳಿಸಿದರು.
ಶಾಸಕ ಬಸವರಾಜ ಮತ್ತಿಮೂಡ ಅವರು ಉಪ ಖಜಾನೆ ಕಚೇರಿ ಉದ್ಘಾಟಿಸಲಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಮಲಾಜಿ, ಜಿಲ್ಲಾ ಖಜಾನೆ ಉಪ ನಿರ್ದೇಶಕರು ಅಶೋಕ ಮತ್ತಿತರರು ಭಾಗವಹಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.