ADVERTISEMENT

ಎರಡು ದಶಕಗಳ ಬೇಡಿಕೆಗೆ ಸ್ಪಂದಿಸಿದ ನಾಯಕ ಬರೀ ನೆನಪು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ಸೆಪ್ಟೆಂಬರ್ 2020, 9:59 IST
Last Updated 24 ಸೆಪ್ಟೆಂಬರ್ 2020, 9:59 IST
ಸುರೇಶ ಅಂಗಡಿಯವರು 2019ರ ಅಕ್ಟೋಬರ್‌ 17ರಂದು ಹೊಸಪೇಟೆಯಲ್ಲಿ ಪ್ರಯಾಣಿಕರ ರೈಲಿಗೆ ಚಾಲನೆ ನೀಡಿದ್ದು
ಸುರೇಶ ಅಂಗಡಿಯವರು 2019ರ ಅಕ್ಟೋಬರ್‌ 17ರಂದು ಹೊಸಪೇಟೆಯಲ್ಲಿ ಪ್ರಯಾಣಿಕರ ರೈಲಿಗೆ ಚಾಲನೆ ನೀಡಿದ್ದು   

ಹೊಸಪೇಟೆ: ಕೊಟ್ಟೂರು–ಹೊಸಪೇಟೆ ನಡುವೆ ಪ್ರಯಾಣಿಕರ ರೈಲು ಓಡಿಸಬೇಕೆಂಬ ಎರಡು ದಶಕಗಳ ಬೇಡಿಕೆಗೆ ತುರ್ತಾಗಿ ಸ್ಪಂದಿಸಿ ಅದನ್ನು ಕಾರ್ಯರೂಪಕ್ಕೆ ತಂದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಈ ಭಾಗದ ಜನತೆಗೆ ಎಂದೂ ಮರೆಯದ ನಾಯಕನಾಗಿ ಕಾಣಿಸಿಕೊಳ್ಳುತ್ತಾರೆ.

ರೈಲು ಓಡಿಸಲು ಅವರು ತೋರಿಸಿದ ಕಾಳಜಿ, ಬದ್ಧತೆಯೇ ಅದಕ್ಕೆ ಕಾರಣ. ಹರಿಹರ–ಕೊಟ್ಟೂರು–ಹೊಸಪೇಟೆ ನಡುವೆ ಪ್ರಯಾಣಿಕರ ರೈಲು ಓಡಿಸಬೇಕು ಎನ್ನುವುದು ಈ ಭಾಗ ಜನರ ಎರಡು ದಶಕಗಳ ಬೇಡಿಕೆಯಾಗಿತ್ತು. 2016ರಲ್ಲಿ ಹರಿಹರ–ಕೊಟ್ಟೂರು ನಡುವೆ ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ವಿಶೇಷ ಆಸ್ಥೆ ವಹಿಸಿ ಪ್ರಯಾಣಿಕರ ರೈಲಿಗೆ ಚಾಲನೆ ಕೊಟ್ಟಿದ್ದರು. ಆದರೆ, ಗಣಿನಗರಿಗೆ ಆ ರೈಲು ವಿಸ್ತರಿಸಬೇಕೆಂಬ ಬೇಡಿಕೆ ನನೆಗುದಿಗೆ ಬಿದ್ದಿತ್ತು.

ಯಾವಾಗ ಸುರೇಶ ಅಂಗಡಿ ಅವರು ರೈಲ್ವೆ ಸಚಿವರಾದರೊ ಆಗ ಈ ಭಾಗದ ಜನರಲ್ಲಿ ಭರವಸೆಯ ಚಿಗುರೊಡೆಯಿತು. ತಕ್ಷಣವೇ ಇಲ್ಲಿನ ವಿಜಯನಗರ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಮುಖಂಡರು ಅವರ ಬಳಿಗೆ ದೌಡಾಯಿಸಿ ವಸ್ತುಸ್ಥಿತಿ ವಿವರಿಸಿದರು. ಅದಾದ ಕೆಲವೇ ದಿನಗಳಲ್ಲಿ ಅಂಗಡಿ ಅವರು, ಪ್ರಯಾಣಿಕರ ರೈಲು ಹೊಸಪೇಟೆ ವರೆಗೆ ವಿಸ್ತರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

ADVERTISEMENT

ಅಂಗಡಿ ಅವರು ನಿರ್ದೇಶನ ನೀಡಿದ ನಂತರ ನನೆಗುದಿಗೆ ಬಿದ್ದಿದ ಹೊಸಪೇಟೆ ರೈಲು ನಿಲ್ದಾಣದ ಮೇಲ್ದರ್ಜೆಗೇರಿಸುವ ಕಾಮಗಾರಿ, ಪ್ಲಾಟ್‌ಫಾರಂ ನಿರ್ಮಾಣ, ಮಾರ್ಗದಲ್ಲಿ ಸಿಗ್ನಲ್‌ ಅಳವಡಿಕೆ, ವಿದ್ಯುತ್‌ ತಂತಿ ಎತ್ತರಿಸುವ ಕೆಲಸ ಮುಗಿಸಲಾಯಿತು. 2019ರ ಅಕ್ಟೋಬರ್‌ 17ರಂದು ಸ್ವತಃ ಸುರೇಶ ಅಂಗಡಿ ಅವರು ಹೊಸಪೇಟೆ ನಿಲ್ದಾಣಕ್ಕೆ ಬಂದು ಪ್ರಯಾಣಿಕರ ರೈಲಿಗೆ ಚಾಲನೆ ನೀಡಿದರು.

ಅಷ್ಟೇ ಅಲ್ಲ, ಅದೇ ರೈಲಿನಲ್ಲಿ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಸೇರಿದಂತೆ ಅಧಿಕಾರಿಗಳೊಂದಿಗೆ ಪಯಣ ಬೆಳೆಸಿದರು. ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ರೈಲು ನಿಲ್ದಾಣದಲ್ಲಿ ಅವರಿಗೆ ಸ್ವಾಗತ ಕೋರಲು ಅಪಾರ ಜನ ಸೇರಿದ್ದರು. ಎಲ್ಲೆಡೆ ಅವರಿಗೆ ಹೂವಿನ ಮಳೆಗರೆದು ಜನ ಭವ್ಯ ಸ್ವಾಗತ ಕೋರಿದರು. ಅಷ್ಟೇ ವಿನಯದಿಂದ ಸ್ಥಳೀಯರ ಸತ್ಕಾರ ಸ್ವೀಕರಿಸಿ, ಅವರ ಮಾತುಗಳನ್ನು ಆಲಿಸಿದ್ದರು ಎಂದು ನೆನಸಿಕೊಳ್ಳುತ್ತಾರೆ ರೈಲ್ವೆ ಹೋರಾಟ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿರುವ ಮಹೇಶ್‌.

‘ಹರಿಹರ, ದಾವಣಗೆರೆಗೆ ಬಸ್‌ ಬಿಟ್ಟರೆ ಬೇರೆ ವ್ಯವಸ್ಥೆ ಇರಲಿಲ್ಲ. ಆದರೆ, ಪ್ರಯಾಣಿಕರ ರೈಲು ಆರಂಭಗೊಂಡ ನಂತರ ಈ ಭಾಗದವರಿಗೆ ಸಾಕಷ್ಟು ಅನುಕೂಲವಾಗಿದೆ. ಸಮಯ, ಹಣ ಕೂಡ ಉಳಿತಾಯವಾಗುತ್ತಿದೆ. ವ್ಯಾಪಾರ ವಹಿವಾಟಿಗೂ ಅನುಕೂಲವಾಗಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಿಗೆ ಬಹಳ ಕಡಿಮೆ ಅವಧಿಯಲ್ಲಿ ಸಂಚರಿಸಲು ಸಹಾಯವಾಗಿದೆ. ನಮ್ಮ ಬೇಡಿಕೆಗೆ ಅಂಗಡಿ ಅವರು ತುರ್ತಾಗಿ ಸ್ಪಂದಿಸಿ ಅನುಷ್ಠಾನಕ್ಕೆ ತಂದರು. ಇದು ಅವರ ಬದ್ಧತೆ ತೋರಿಸುತ್ತದೆ’ ಎಂದರು.

‘ಅಂಗಡಿ ಅವರು ಸಚಿವರಾದ ನಂತರ ಈ ಭಾಗದಲ್ಲಿ ರೈಲ್ವೆ ಮಾರ್ಗ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಪ್ರವಾಸಿ ತಾಣಗಳನ್ನು ಬೆಸೆಯಲು ವಿಜಯಪುರ–ಯಶವಂತಪುರ ರೈಲು ಆರಂಭಿಸಿದರು. ನುಡಿದಂತೆ ನಡೆದುಕೊಳ್ಳುವ ವ್ಯಕ್ತಿ ಅವರಾಗಿದ್ದರು. ಅವರ ಅಕಾಲಿಕ ನಿಧನದಿಂದ ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ’ ಎಂದು ಸಮಿತಿಯ ಇನ್ನೊಬ್ಬ ಸದಸ್ಯ ವೈ. ಯಮುನೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.