ಬಳ್ಳಾರಿ: ಹಿಂದುಳಿದ ವರ್ಗಗಳ ಆಯೋಗದ ಮೂಲಕ ರಾಜ್ಯದಲ್ಲಿ ನಡೆದಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸಮೀಕ್ಷೆದಾರರಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ. ಆದರೆ, ಸಮೀಕ್ಷೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸ್ವಸಹಾಯ ಸಂಘಗಳ ಸಮುದಾಯ, ಜೀವನೋಪಾಯ ಸಂಪನ್ಮೂಲ ವ್ಯಕ್ತಿಗಳಿಗೆ, ಆಶಾಗಳಿಗೆ ಮಾತ್ರ ಹಣ ಬಿಡುಗಡೆ ಮಾಡಿಲ್ಲ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸೂಚನೆ ಮೇರೆಗೆ ಸಂಪನ್ಮೂಲ ವ್ಯಕ್ತಿಗಳು, ಆಶಾಗಳು ಸಮೀಕ್ಷೆಗೂ ಪೂರ್ವದಲ್ಲಿ ಜಾಗೃತಿ ಅಭಿಯಾನ ಕೈಗೊಂಡಿದ್ದರು. ಇವರು ಭೇಟಿ ನೀಡಿ, ಜಾಗೃತಿ ಮೂಡಿಸುವ ಬರುವ ಪ್ರತಿ ಆಧಾರದಲ್ಲಿ ತಲಾ ₹4 ನೀಡುವುದಾಗಿ ಸರ್ಕಾರ ಪ್ರಕಟಿಸಿತ್ತು.
ಪ್ರತಿ ಮನೆ ಭೇಟಿಗೆ ಒಬ್ಬರು ₹4 ಅಂತಾರೆ, ಇನ್ನೊಬ್ಬರು ₹5 ಅಂತಾರೆ. ಆದರೆ ಯಾವುದೂ ಇನ್ನೂ ಬಂದಿಲ್ಲ. ಬಡತನದ ಹಿನ್ನಲೆಯ ನಮಗೆ ಈ ಹಣ ಸಿಕ್ಕರೆ ಅನುಕೂಲವಾಗಲಿದೆ. ಕೆ.ಸಿ.ಧನಲಕ್ಷ್ಮಿ,ಕೆ.ಸಿ.ಧನಲಕ್ಷ್ಮಿ, ಎಲ್‌ಸಿಆರ್‌ಪಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿ
ಅದರಂತೆ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 1,38,317 ಮನೆಗಳನ್ನು ಸಂಪನ್ಮೂಲ ವ್ಯಕ್ತಿಗಳು, ಆಶಾಗಳು ಭೇಟಿ ನೀಡಿ ಮಾಹಿತಿ ನೀಡಿ ಬಂದಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 577 ಮಂದಿ ಸಮೀಕ್ಷೆ ಪೂರ್ವ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಸ್ವಸಹಾಯ ಸಂಘಗಳ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಆಶಾಗಳೂ ಇದ್ದಾರೆ.
‘ಮನೆ ಗುರುತಿಸುವ ಬಗ್ಗೆ ಸಮೀಕ್ಷೆಗೂ ಮೊದಲೇ ಗೂಗಲ್ ಮೀಟ್ ಮೂಲಕ ನಮಗೆ ತರಬೇತಿ ನೀಡಲಾಗಿತ್ತು. ಸಮೀಕ್ಷೆ ಆರಂಭಕ್ಕೂ ಮೊದಲೇ ನಾವು ಕ್ಷೇತ್ರಗಳಲ್ಲಿ ಕೆಲಸ ಆರಂಭಿಸಿದ್ದೆವು. ಮನೆಗಳಿಗೆ ಹೋಗುತ್ತಿದ್ದೆವು. ಕುಟುಂಬಸ್ಥರನ್ನು ಮಾತನಾಡಿಸಿ, ಸಮೀಕ್ಷೆ ಬಗ್ಗೆ ಮಾಹಿತಿ ಕೊಟ್ಟು ಬರುತ್ತಿದ್ದೆವು. ಸಮೀಕ್ಷಕರು ಬರಲಿದ್ದಾರೆ, 60 ಪ್ರಶ್ನೆಗಳನ್ನು ನಿಮಗೆ ಕೇಳಲಿದ್ದಾರೆ. ಇದಕ್ಕೆ ನೀವು ಉತ್ತರಿಸಬೇಕು, ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಸಮೀಕ್ಷೆ ನಡೆಯುತ್ತಿರುವುದು ನಿಮಗಾಗಿ, ನಿಮ್ಮ ಏಳಿಗೆಗಾಗಿ ಎಂದು ಮಾಹಿತಿ ಕೊಟ್ಟು ಬರುತ್ತಿದ್ದೆವು. ಜತೆಗೆ 60 ಪ್ರಶ್ನೆಗಳ ಪಟ್ಟಿಯನ್ನೂ ಮೊದಲೇ ಕೊಡುತ್ತಿದ್ದೆವು. ಜತೆಗೆ ಗುರುತಿನ ಚೀಟಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಸೂಚಿಸುತ್ತಿದ್ದೆವು. ನಾವು ಇಷ್ಟು ಕೆಲಸ ಮಾಡಿದ್ದರಿಂದಲೇ ಸಮೀಕ್ಷಕರು ಸುಲಭವಾಗಿ ಸಮೀಕ್ಷೆ ಮಾಡಲು ಸಾಧ್ಯವಾಯಿತು. ಇಲ್ಲದೇ ಹೋಗಿದ್ದಿದ್ದರೆ ಜನರಿಂದ ಸ್ಪಂದನೆ ಸಿಗುತ್ತಿರಲಿಲ್ಲ ಎಂದು ಸ್ವಸಹಾಯ ಸಂಘಗಳ ಸಮುದಾಯ ಸಂಪನ್ಮೂಲ ವ್ಯಕ್ತಿಯೊಬ್ಬರು’ ಪ್ರಜಾವಾಣಿಗೆ ಮಾಹಿತಿ ನೀಡಿದ್ದಾರೆ.
‘ನಾಲ್ವರಿಗೆ ಸೇರಿ ಒಂದು ಊರು ಹಂಚಿಕೆ ಮಾಡಲಾಗಿತ್ತು. ನಾನು 350 ಮನೆಗಳನ್ನು ಸಂಪರ್ಕಿಸಿ ಅವರಿಗೆ ಮಾಹಿತಿ ನೀಡಿ ಬಂದಿದ್ದೇನೆ. ಕೆಲವರು ಇನ್ನೂ ಜಾಸ್ತಿ ಮನೆಗಳನ್ನು ಸಂಪರ್ಕಿಸಿದ್ದಾರೆ. ಸಮೀಕ್ಷೆ ವೇಳೆ ಮೊದಲ ಸವಲು ಎದುರಾಗಿದ್ದು ನಮಗೇನೆ. ಸುಶಿಕ್ಷಿತರು ಸಮೀಕ್ಷೆ ಬಗ್ಗೆ ಅರ್ಥ ಮಾಡಿಕೊಳ್ಳುತ್ತಿದ್ದರು. ಸುಶಿಕ್ಷಿತರಲ್ಲದವರು ನಮಗ್ಯಾಕೆ ಎಂಬ ಮನೋಭಾವದಲ್ಲಿ ಮಾತನಾಡುತ್ತಿದ್ದರು. ಅವರಿಗೆಲ್ಲ ತಿಳಿ ಹೇಳುವುದೇ ಸವಾಲಿನ ಕೆಲಸವಾಗಿತ್ತು’ ಎಂದು ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.