ADVERTISEMENT

ರಸ್ತೆ ಗುಂಡಿ ಮುಚ್ಚಿದ ತಹಶೀಲ್ದಾರ್

ಸ್ಥಳೀಯ ಯುವಕರು, ಸಂಘಟನೆಗಳ ಬೆಂಬಲ: ಜನರಿಂದ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 9:08 IST
Last Updated 14 ಅಕ್ಟೋಬರ್ 2019, 9:08 IST
ಕೂಡ್ಲಿಗಿಯ ಬೆಂಗಳೂರು ರಸ್ತೆಯಲ್ಲಿ ಉಂಟಾಗಿದ್ದ ಗುಂಡಿಗಳನ್ನು ತಹಶೀಲ್ದಾರ್ ಎಸ್.ಮಹಾಬಲೇಶ್ವರ್ ಹಾಗೂ ಯುವಕರು ಭಾನುವಾರ ಸಿಮೆಂಟ್ ಮಿಶ್ರಿತ ಜಲ್ಲಿಕಲ್ಲು ಹಾಕುವ ಮೂಲಕ ಮುಚ್ಚಿದರು
ಕೂಡ್ಲಿಗಿಯ ಬೆಂಗಳೂರು ರಸ್ತೆಯಲ್ಲಿ ಉಂಟಾಗಿದ್ದ ಗುಂಡಿಗಳನ್ನು ತಹಶೀಲ್ದಾರ್ ಎಸ್.ಮಹಾಬಲೇಶ್ವರ್ ಹಾಗೂ ಯುವಕರು ಭಾನುವಾರ ಸಿಮೆಂಟ್ ಮಿಶ್ರಿತ ಜಲ್ಲಿಕಲ್ಲು ಹಾಕುವ ಮೂಲಕ ಮುಚ್ಚಿದರು   

ಕೂಡ್ಲಿಗಿ: ನಿರಂತರ ಮಳೆಯಿಂದ ಪಟ್ಟಣದ ರಸ್ತೆಗಳಲ್ಲಿ ತಗ್ಗುಗಳು ಉಂಟಾಗಿದ್ದು, ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುವುದೇ ದುಸ್ತರವಾಗಿತ್ತು. ಸ್ಥಳೀಯ ತಹಶೀಲ್ದಾರ್ ಎಸ್.ಮಹಾಬಲೇಶ್ವರ ಅವರು ಭಾನುವಾರ ಬೆಳಿಗ್ಗೆ ಯುವಕರೊಂದಿಗೆ ಸೇರಿ ರಸ್ತೆಯಲ್ಲಿ ಸಿಮೆಂಟ್ ಮಿಶ್ರಿತ ಜಲ್ಲಿ ಕಲ್ಲುಗಳನ್ನು ಹಾಕಿ ಗುಂಡಿಗಳನ್ನುಮುಚ್ಚಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ಬೆಂಗಳೂರು ರಸ್ತೆ, ಅಂಬೇಡ್ಕರ್ ವೃತ್ತ, ಪಾದಗಟ್ಟೆ ವೃತ್ತ ಸೇರಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಮುಂದೆ ಸಾಗಲಾರದಂಥ ಪರಿಸ್ಥಿತಿ ಇತ್ತು. ಈ ಗುಂಡಿಗಳನ್ನು ಮುಚ್ಚಿಸುವಂತೆ ತಹಶೀಲ್ದಾರ್ ಸಂಬಂಧಿಸಿದ ಇಲಾಖೆಗೆ ಪತ್ರ ಬರೆದಿದ್ದರೂ ಅದಕ್ಕೆ ಸ್ಪಂದನೆ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ತಹಶೀಲ್ದಾರ್ ಭಾನುವಾರ ಖಾಸಗಿ ಕ್ರಷರ್ ಮೂಲಕ ಸಿಮೆಂಟ್ ಮಿಶ್ರಿತ ಜಲ್ಲಿ ಕಲ್ಲನ್ನು ತರಿಸಿ ತಾವೇ ಮುಂದೆ ನಿಂತುಗುಂಡಿ ಮುಚ್ಚಲು ಮುಂದಾದರು.

ಈ ವಿಷಯ ತಿಳಿದ ಪಟ್ಟದ ಯುವ ಬ್ರೀಗೇಡ್ ಯುವಕರು, ಸಾರ್ವಜನಿಕರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಸಲಿಕೆ ಪುಟ್ಟಿ ಹಿಡಿದು ಗುಂಡಿಗಳನ್ನು ಮುಚ್ಚಿದರು. ಯುವ ಬ್ರಿಗೇಡ್‍ ಸಂಚಾಲಕ ಕೆ.ಎಚ್.ಎಂ.ಸಚಿನ ಮಾರ್, ಎಚ್.ಎಂ.ಗಂಗಾಧರ, ವಿವೇಕಾ
ನಂದ, ಭರತ್, ವೀರೇಶ್, ಸುರೇಶ್, ಮಂಜುನಾಥ, ಕಾವಲಿ ನಾಗರಾಜ, ವಿನಯ್ ಹಿರೇಮಠ, ರಾಮಂಜನಿ, ರಾಘವೇಂದ್ರ, ಕಂದಾಯ ಇಲಾಖೆಯ ಶಿವಕುಮಾರು, ವಾಸು ಮತ್ತು ಮಹೇಶ್ ಈ ಸಂದರ್ಭದಲ್ಲಿ ಇದ್ದರು.

ADVERTISEMENT

ಎಚ್ಚೆತ್ತ ಲೋಕೋಪಯೋಗಿ ಇಲಾಖೆ

ಕೂಡ್ಲಿಗಿ: ರಸ್ತೆಗಳಲ್ಲಿನ ಬಿದ್ದಿದ್ದ ಗುಂಡಿಗಳನ್ನು ಮುಚ್ಚಲು ಸ್ವತಃ ತಹಶೀಲ್ದಾರ್ ಮುಂದಾಗುತ್ತಿದ್ದಂತೆ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭಾನುವಾರ ಸಂಜೆ ಪಟ್ಟಣದ ರಸ್ತೆಗಳಲ್ಲಿರುವ ಬಹುತೇಕ ಗುಂಡಿಗಳನ್ನು ಸಿಮೆಂಟ್ ಮಿಶ್ರಿತ ಜಲ್ಲಿ ಕಲ್ಲಿನಿಂದ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

‘ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದು ನಮ್ಮ ಗಮನಕ್ಕೂ ಬಂದಿತ್ತು. ಆದರೆ, ಮಳೆ ಬರುತ್ತಿರುವುದರಿಂದ ಮಳೆಯ ನೀರಿನಲ್ಲಿ ಜಲ್ಲಿ, ಸಿಮೆಂಟ್ ಕೊಚ್ಚಿಕೊಂಡು ಹೋಗುತ್ತದೆ ಎನ್ನುವ ಕಾರಣಕ್ಕೆ ಗುಂಡಿಗಳನ್ನು ಮುಚ್ಚಿರಲಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಶಿವಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.