ADVERTISEMENT

ಉಪಚುನಾವಣೆ ಹೇರಿದವರಿಗೆ ಪಾಠ ಕಲಿಸಿ

ಜೆ.ಡಿ.ಎಸ್‌. ಕಾರ್ಯಕರ್ತರ ಸಭೆಯಲ್ಲಿ ಮಾಜಿಶಾಸಕ ನಬಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 13:42 IST
Last Updated 25 ಸೆಪ್ಟೆಂಬರ್ 2019, 13:42 IST
ಸಭೆ ಉದ್ದೇಶಿಸಿ ಮಾಜಿಶಾಸಕ ಎನ್‌.ಎಂ. ನಬಿ ಮಾತನಾಡಿದರು–ಪ್ರಜಾವಾಣಿ ಚಿತ್ರ
ಸಭೆ ಉದ್ದೇಶಿಸಿ ಮಾಜಿಶಾಸಕ ಎನ್‌.ಎಂ. ನಬಿ ಮಾತನಾಡಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ‘ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಕಾರಣರಾದ ಅನರ್ಹ ಶಾಸಕ ಆನಂದ್‌ ಸಿಂಗ್‌ ಅವರಿಗೆ ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ, ಪಕ್ಷಾಂತರಿಗಳಿಗೆ ಒಳ್ಳೆಯ ಸಂದೇಶ ರವಾನಿಸಬೇಕು’ ಎಂದು ಮಾಜಿಶಾಸಕ ಎನ್‌.ಎಂ. ನಬಿ ಹೇಳಿದರು.

ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್‌. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉತ್ತಮ ಕೆಲಸ ಮಾಡುತ್ತಿತ್ತು. ಆದರೆ, ಆನಂದ್‌ ಸಿಂಗ್‌ ಅವರು ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದರು. ನಂತರ ಬೇರೆಯವರು ಅವರ ದಾರಿ ಅನುಸರಿಸಿದರು. ಹೀಗಾಗಿ ಸರ್ಕಾರ ಬೀಳುವಂತಾಯಿತು. ಅಲ್ಲದೇ ಉಪಚುನಾವಣೆ ಕೂಡ ನಡೆಸಬೇಕಾಗಿ ಬಂದಿದೆ’ ಎಂದರು.

‘ಹಣ, ಅಧಿಕಾರದಿಂದ ಏನು ಬೇಕಾದರೂ ಮಾಡಬಹುದು ಎಂದು ಕೆಲವರು ಮೆರೆದಾಡುತ್ತಿದ್ದಾರೆ. ಅಂತಹವರಿಗೆ ಜನ ಸೂಕ್ತ ಪಾಠ ಕಲಿಸುತ್ತಾರೆ. ಎಲ್ಲದಕ್ಕೂ ಒಂದು ಕಾಲ ಇರುತ್ತದೆ. ಅಲ್ಲಿಯವರೆಗೆ ಅಂತಹವರಿಗೆ ಸಹಿಸಿಕೊಳ್ಳುವುದು ಅನಿವಾರ್ಯ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಹೊಸಪೇಟೆ ಕೇಂದ್ರವಾಗಿಟ್ಟುಕೊಂಡು ವಿಜಯನಗರ ಜಿಲ್ಲೆ ಮಾಡಬೇಕೆಂದು ಈ ಹಿಂದೆಯೇ ನಾನು ಹಾಗೂ ಎಂ.ಪಿ. ಪ್ರಕಾಶರು ಪ್ರಯತ್ನಿಸಿದ್ದೆವು. ಇತ್ತೀಚೆಗೆ ಆನಂದ್‌ ಸಿಂಗ್‌ ಅವರು ಸಿ.ಎಂ. ಬಳಿಗೆ ನಿಯೋಗ ಕರೆದೊಯ್ದಾಗ ನಾನು ಹೋಗಿದ್ದೆ. ಆದರೆ, ಕೂಡ್ಲಿಗಿಯನ್ನು ಬಳ್ಳಾರಿಗೆ ಸೇರಿಸಬೇಕೆಂದಾಗ ವಿರೋಧ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಕೂಡ್ಲಿಗಿಯನ್ನು ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಸೇರಿಸಲು ಸಿ.ಎಂ.ಗೆ ಮನವಿ ಮಾಡಿರುವೆ’ ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಎನ್‌.ಟಿ. ಬೊಮ್ಮಣ್ಣ, ‘ಪಕ್ಷದ ವರಿಷ್ಠರು ಯಾರಿಗಾದರೂ ಟಿಕೆಟ್‌ ನೀಡಲಿ. ಅವರ ಗೆಲುವಿಗೆ ಎಲ್ಲರೂ ಸೇರಿ ಶ್ರಮಿಸಬೇಕು. ವರಿಷ್ಠರ ತೀರ್ಮಾನವನ್ನು ಎಲ್ಲರೂ ಗೌರವಿಸಬೇಕು’ ಎಂದು ಹೇಳಿದರು.

ತಾಲ್ಲೂಕು ಅಧ್ಯಕ್ಷ ಬಸಪ್ಪ ಮೇಡ್ಲೆರಿ ಮಾತನಾಡಿ, ‘ಜೆ.ಡಿ.ಎಸ್‌. ಪರ ಜನ ಒಳ್ಳೆಯ ಒಲವು ಹೊಂದಿದ್ದಾರೆ. ಎಲ್ಲರೂ ಒಂದಾಗಿ ಚುನಾವಣೆ ಸ್ಪರ್ಧಿಸಿದರೆ ಗೆಲುವು ಖಂಡಿತ’ ಎಂದರು.

ಪಕ್ಷದ ಯುವ ಘಟಕದ ಕಾರ್ಯಾಧ್ಯಕ್ಷ ಎಂ.ಎನ್.ನೂರ್ ಅಹಮ್ಮದ್,ಅಲ್ಪಸಂಖ್ಯಾತ ಘಟಕದ ರಾಜ್ಯ ಜಂಟಿ ಕಾರ್ಯದರ್ಶಿ ಅತಾಯು ರಸೂಲ್, ಮುಖಂಡರಾದ ಕೊಟ್ರೇಶ್, ಕಪ್ಪಗಲ್ ರಸೂಲ್ ಸಾಬ್, ಕೆ. ಕೃಷ್ಣ, ಪಾಂಡುರಂಗ ಶೆಟ್ಟಿ, ಚಂದ್ರಕಾಂತ್ ಕಪ್ಲಿ, ಖಾಜಾ ಹುಸೇನ್ ನಿಯಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.