ADVERTISEMENT

ದೇಶದ ದೇಗುಲಗಳನ್ನು ಸುತ್ತಿ ದಾಖಲೆ ಬರೆಯಲು ಹೊರಟ ಇಬ್ಬರು ಟೆಕ್ಕಿಗಳು

ತಮಿಳುನಾಡಿನ ಇಬ್ಬರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಂದ 500 ದೇಗುಲಗಳ ಪರಿಭ್ರಮಣೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 16 ನವೆಂಬರ್ 2019, 19:45 IST
Last Updated 16 ನವೆಂಬರ್ 2019, 19:45 IST
ಹಂಪಿ ವಿರೂಪಾಕ್ಷೇಶ್ವರ ದೇಗುಲದ ಎದುರಿನಲ್ಲಿ ಕಾರ್ತಿಕೇಯನ್‌ ಮತ್ತು ಪಾಂಡಿದೊರೈಪ್ರಜಾವಾಣಿ ಚಿತ್ರ: ರಾಚಯ್ಯ ಎಸ್‌. ಸ್ಥಾವರಿಮಠ
ಹಂಪಿ ವಿರೂಪಾಕ್ಷೇಶ್ವರ ದೇಗುಲದ ಎದುರಿನಲ್ಲಿ ಕಾರ್ತಿಕೇಯನ್‌ ಮತ್ತು ಪಾಂಡಿದೊರೈಪ್ರಜಾವಾಣಿ ಚಿತ್ರ: ರಾಚಯ್ಯ ಎಸ್‌. ಸ್ಥಾವರಿಮಠ   

ಹೊಸಪೇಟೆ: ಭಾರತದ ಧಾರ್ಮಿಕ ಪರಂಪರೆ, ಶ್ರೀಮಂತ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ದೇಶದ ಪ್ರಮುಖ ದೇವಸ್ಥಾನಗಳಿಗೆ ಭೇಟಿ ಕೊಟ್ಟು, ಅದರ ಮೂಲಕ ಹೊಸ ವಿಶ್ವ ದಾಖಲೆ ಬರೆಯಲು ಮುಂದಾಗಿದ್ದಾರೆ ತಮಿಳುನಾಡಿನ ಇಬ್ಬರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳು.

ಶಿವಗಂಗಾ ತಾಲ್ಲೂಕಿನ ವೆಲನಗುಡಿ ಗ್ರಾಮದವರಾದ ಕಾರ್ತಿಕೇಯನ್‌ ಮತ್ತು ಪಾಂಡಿದೊರೈ ಇಂತಹದ್ದೊಂದು ವಿನೂತನ ಕೆಲಸಕ್ಕೆ ಹಾಕಿದ್ದಾರೆ. ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕೇರಳದ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ರಾಜ್ಯ ಪ್ರವೇಶಿಸಿ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ಹಂಪಿಗೆ ಶುಕ್ರವಾರ ತಲುಪಿದ್ದಾರೆ.

ದೇಶದ 22 ರಾಜ್ಯಗಳ 500 ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ, ದರ್ಶನ ಪಡೆದು ಅಲ್ಲಿ ನಡೆಯುವ ಆಚರಣೆ, ಧಾರ್ಮಿಕ ಹಿನ್ನೆಲೆ ಬಗ್ಗೆ ಅಧ್ಯಯನ ಮಾಡಿ ಅದನ್ನು ಹೊಸ ತಲೆಮಾರಿಗೆ ತಿಳಿಸಿಕೊಡುವುದು ಇವರ ಪ್ರವಾಸದ ಮುಖ್ಯ ಗುರಿ.

ADVERTISEMENT

ಅದಕ್ಕಾಗಿ ಅವರು 13,000 ಕಿ.ಮೀ. ಕ್ರಮಿಸಬೇಕಿದೆ. ನಿತ್ಯ 300 ಕಿ.ಮೀ ಕ್ರಮಿಸುತ್ತಿದ್ದಾರೆ. ಈಗಾಗಲೇ 100 ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಅವರದೇ ಆದ ಬಿಳಿಬಣ್ಣದ ಕಾರಿಗೆ ವಿವಿಧ ದೇವಸ್ಥಾನಗಳ ಸ್ಟಿಕ್ಕರ್‌ಗಳನ್ನು ಅಂಟಿಸಿ ಹೊಸ ರೂಪ ಕೊಟ್ಟಿದ್ದಾರೆ. ಅದು ಎಲ್ಲರ ಗಮನ ಸೆಳೆಯುತ್ತಿದೆ. ಅಷ್ಟೇ ಅಲ್ಲ, ಅದೇ ಅವರ ಪ್ರವಾಸದ ಉದ್ದೇಶವನ್ನು ಸಾರುವಂತಿದೆ.

ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಬಂದಾಗ ಅವರನ್ನು ’ಪ್ರಜಾವಾಣಿ’ ಮಾತಿಗೆಳೆದಾಗ, ‘ಇಂದಿನ ಹೆಚ್ಚಿನ ಯುವಕರು ಮೊಬೈಲ್‌ನಲ್ಲಿ ಬಹಳಷ್ಟು ಕಾಲಹರಣ ಮಾಡುತ್ತಿದ್ದಾರೆ. ಅವರು ದೇಶ, ಧರ್ಮ, ಸಂಸ್ಕೃತಿ, ಪರಂಪರೆಯನ್ನು ಮರೆಯುತ್ತಿದ್ದಾರೆ. ನಮ್ಮ ಪೂರ್ವಜರು ಹಾಕಿಕೊಟ್ಟ ದಾರಿಯಿಂದ ವಿಮುಖರಾಗುತ್ತಿದ್ದಾರೆ. ನಶಿಸಿ ಹೋಗುತ್ತಿರುವ ಭಾರತದ ಶ್ರೀಮಂತ ಧಾರ್ಮಿಕ ಪರಂಪರೆ, ಸಂಸ್ಕೃತಿ ಎತ್ತಿ ಹಿಡಿಯುವುದು, ಅದರ ಮಹತ್ವ ಸಾರುವ ಉದ್ದೇಶದಿಂದ ಈ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ’ ಎಂದು ಪಾಂಡಿದೊರೈ ಮತ್ತು ಕಾರ್ತಿಕೇಯನ್‌ ಹೇಳಿದರು.

ನ. 7ರಂದು ತಮಿಳುನಾಡಿನ ಶಿವಗಂಗಾ ತಾಲ್ಲೂಕಿನ ವೆಲನಗುಡಿಯ ಸೊಲಕಟ್ಟ ವಿನಾಯಕ ದೇವಸ್ಥಾನದಿಂದ ಪ್ರವಾಸ ಆರಂಭಿಸಿರುವ ಇವರು ತಮಿಳುನಾಡು, ಕೇರಳ ಮತ್ತು ಕರ್ನಾಟಕದ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದಾರೆ. ಕೇರಳದ ತಿರುವನಂತಪುರದ ಶಿವ ದೇವಸ್ಥಾನ, ತ್ರಿಶೂರಿನ ಗುರಿವಾಯೂರಿನ ಕೃಷ್ಣ ದೇಗುಲ, ತಲಚೇರಿಯ ಶಿವ ದೇವಸ್ಥಾನ, ಅತ್ತಿಕ್ಕಲ್‌ನ ಭಗವತಿ ಅಮ್ಮಾ ದೇವಸ್ಥಾನದಿಂದ ತಲಕಾವೇರಿ ಮೂಲಕ ರಾಜ್ಯ ಪ್ರವೇಶಿಸಿದ್ದಾರೆ.

ಹೊರನಾಡು, ಶೃಂಗೇರಿಯಿಂದ ದಾವಣಗೆರೆಯ ದುರ್ಗಾ, ಅಯ್ಯಪ್ಪ, ಹನುಮಾನ ದೇವಸ್ಥಾನದಿಂದ ಹಂಪಿ ವಿರೂಪಾಕ್ಷ ದೇಗುಲಕ್ಕೆ ಬಂದಿದ್ದಾರೆ. ಹನುಮನ ಜನ್ಮಸ್ಥಳವೆಂದೇ ಪ್ರತೀತಿ ಇರುವ ಗಂಗಾವತಿಯ ಅಂಜನಾದ್ರಿಗೆ ಭೇಟಿ ಕೊಟ್ಟು ಮುರುಡೇಶ್ವರದತ್ತ ಪಯಣ ಬೆಳೆಸಿದ್ದಾರೆ.

ಗೋಕರ್ಣ ಸೇರಿದಂತೆ ಇತರೆ ದೇವಸ್ಥಾನಗಳನ್ನು ಸಂದರ್ಶಿಸಿ ಬಳಿಕ ಮಹಾರಾಷ್ಟ್ರ ಪ್ರವೇಶಿಸಲು ಯೋಜನೆ ಹಾಕಿಕೊಂಡಿದ್ದಾರೆ. ಬಳಿಕ ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಉತ್ತರ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳ ಮೂಲಕ ಪುನಃ ತಮಿಳುನಾಡಿನ ವೆಲನಗುಡಿಯಲ್ಲಿ ಪ್ರವಾಸ ಕೊನೆಗೊಳಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.