ADVERTISEMENT

ತೆಕ್ಕಲಕೋಟೆ: ಉತ್ಖನನ ಅಂತಿಮ ಹಂತದ ಕಾರ್ಯಾಚರಣೆ

ಸ್ಥಳಕ್ಕೆ ಎಸ್‌.ಪಿ ಡಾ.ಸುಮನ್ ಡಿ. ಪನ್ನೇಕರ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 7:37 IST
Last Updated 12 ಫೆಬ್ರುವರಿ 2026, 7:37 IST
ತೆಕ್ಕಲಕೋಟೆ ಪಟ್ಟಣದ ಪ್ರಾಗೈತಿಹಾಸಿಕ ನೆಲೆಗಳ ಉತ್ಖನನ ಸ್ಥಳಕ್ಕೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ ಭೇಟಿ ನೀಡಿ ಮಾಹಿತಿ ಪಡೆದರು
ತೆಕ್ಕಲಕೋಟೆ ಪಟ್ಟಣದ ಪ್ರಾಗೈತಿಹಾಸಿಕ ನೆಲೆಗಳ ಉತ್ಖನನ ಸ್ಥಳಕ್ಕೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ ಭೇಟಿ ನೀಡಿ ಮಾಹಿತಿ ಪಡೆದರು   

ತೆಕ್ಕಲಕೋಟೆ: ಕಳೆದ ಎರಡು ತಿಂಗಳಿನಿಂದ ಇಲ್ಲಿನ 'ಗೌಡ್ರಮೂಲೆ' 'ಬಾಳೇತೋಟ' ಬೆಟ್ಟಪ್ರದೇಶಗಳಲ್ಲಿ ನಡೆಯುತ್ತಿರುವ ಉತ್ಖನನ ಅಂತಿಮ ಹಂತದ ಕಾರ್ಯಾಚರಣೆ ನಡೆಯುತ್ತಿದ್ದು, ಬುಧವಾರ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದರು.

ಮಾನವನ ಎರಡು ಅಸ್ಥಿಪಂಜರ ದೊರೆತ ಸ್ಥಳದಲ್ಲಿ ಹಾಜರಿದ್ದ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ಅವರೊಂದಿಗೆ ಮಾತನಾಡಿ, ಇದೇ ಸ್ಥಳದಲ್ಲಿ ಮಾನವನ ಅಸ್ಥಿಪಂಜರ ಇದೆ ಎಂದು ಹೇಗೆ ಗುರುತಿಸಿದಿರಿ ಎಂದು ಕುತೂಹಲದಿಂದ ಕೇಳಿದರು.

'ಮಡಿಕೆ ಚೂರು, ಕಬ್ಬಿಣದ ಅದಿರು, ಎಲುಬಿನ ಚೂರು ಹಾಗೂ ಇತರೆ ಪ್ರಾಚೀನ ವಸ್ತುಗಳು ಈ ಸ್ಥಳದಲ್ಲಿ ಗೋಚರಿಸಿದವು. ಆರಂಭದಲ್ಲಿ ಇಲ್ಲಿ ನಮಗೆ ಸಂಪೂರ್ಣ ಅಸ್ಥಿಪಂಜರ ಸಿಗುವ ನಿರೀಕ್ಷೆ ಇರಲಿಲ್ಲ. ಶೋಧಕಾರ್ಯ ಮುಂದುವರೆಸಿದಾಗ, ಅದೃಷ್ಟವಶಾತ್ ಒಂದು ಸಂಪೂರ್ಣ ಹಾಗೂ ಮತ್ತೊಂದು ಭಾಗಶಃ ಅಸ್ಮಿಪಂಜರ ದೊರತಿರುವುದು ಉತ್ಖನನ ಕಾರ್ಯಕ್ಕೆ ಅರ್ಥ ಕಲ್ಪಿಸಿದೆ" ಎಂದು ಹೇಳಿದರು.

ADVERTISEMENT

'ಪ್ರಾಖ್ತನಶಾಸ್ತ್ರವು ಕೆಲವೊಮ್ಮೆಅದೃಷ್ಟ ಎಂಬಂತೆ ಕಂಡುಬಂದರೂ, ನಿರಂತರ ಪರಿಶ್ರಮ ಇದ್ದಲ್ಲಿ ಈ ರೀತಿಯ ಫಲಿತಾಂಶ ಬರುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ' ಎಂದರು.

ಮಡಿಕೆಗಳು ದೊರೆತ ಸ್ಥಳಕ್ಕೆ ಭೇಟಿ ನೀಡಿದ ಅವರು ಸ್ಥಳದಲ್ಲಿ ಉತ್ಖತನ ಕಾರ್ಯದಲ್ಲಿ ತೊಡಗಿದ್ದ, ರಾಬರ್ಟ್ ಬ್ರೂಸ್ ಪೂಟ್ ವಸ್ತುಸಂಗ್ರಹಾಲಯದ ತಾಂತ್ರಿಕ ಸಹಾಯಕಿ ಗೌರಿ ಅವರೊಂದಿಗೆ ಶವಸಂಸ್ಕಾರದ ಎರಡನೇ ವಿಧಾನವಾದ ಮಡಿಕೆಯಲ್ಲಿ ಅಸ್ಥಿಸಂಸ್ಕಾರ ಪದ್ದತಿ ಕುರಿತು ಹೆಚ್ಚಿನ ಮಾಹಿತಿ ಪಡೆದರು.

ದೊಡ್ಡಗಾತ್ರದ ಮೂರು ಮಡಿಕೆ ಹಾಗೂ ಚಿಕ್ಕಗಾತ್ರದ ನಾಲ್ಕು ಮಡಕೆಗಳು ದೊರೆತಿದ್ದು, ಇವುಗಳನ್ನು ಜೋಪಾನವಾಗಿ ತೆಗೆಯುವ ಕಾರ್ಯ ನಡೆಯುತ್ತಿದೆ. ಈ ಸ್ಥಳದಲ್ಲಿ ಆಹಾರಧಾನ್ಯ ದೊರೆತಿರುವುದು ಮಹತ್ವದ ಸಂಗತಿ ಎಂದು ತಿಳಿಸಿದರು.

'ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಎಸ್‌ಪಿ ಪನ್ನೇಕರ, ‘ಐತಿಹಾಸಿಕ ಕಾಲದ ಬಗೆಗಿನ ವೈಯಕ್ತಿಕ ಆಸಕ್ತಿ ಹಾಗೂ ಮಾಧ್ಯಮದಲ್ಲಿ ವರದಿ ನನ್ನನ್ನು ಇಲ್ಲಿಗೆ ಬರುವಂತೆ ಮಾಡಿತು‘ ಎಂದರು.

ಸಿರುಗುಪ್ಪ ತಹಶೀಲ್ದಾರ್ ಗೌಸಿಯಾಬೇಗಂ, ಸಿರುಗುಪ್ಪ ಡಿವೈಎಸ್ ಪಿ ಮಾಲತೇಶ ಕೊನಬೇವು, ಸಿಪಿಐ ಹನುಮಂತಪ್ಪ ವೈ, ತೆಕ್ಕಲಕೋಟೆ ಸಿಪಿಐ ಚಂದನ್ ಗೋಪಾಲ್, ಪಿಎಸ್‌ಐ ಸದ್ದಾಂ ಹುಸೇನ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಡ್ಡೇರು ಸಿದ್ದಯ್ಯ, ಗ್ರಾಮ ಆಡಳಿತ ಅಧಿಕಾರಿ ಶಿವರಾಜ ಹಾಜರಿದ್ದರು.

ತೆಕ್ಕಲಕೋಟೆ ಪಟ್ಟಣದ ಪ್ರಾಗೈತಿಹಾಸಿಕ ನೆಲೆಗಳ ಉತ್ಖನನ ಸ್ಥಳಕ್ಕೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪನ್ನೇಕರ ಭೇಟಿ ನೀಡಿ ಮಾಹಿತಿ ಪಡೆದರು
ತೆಕ್ಕಲಕೋಟೆ ಪಟ್ಟಣದ ಗೌಡ್ರಮೂಲೆಯ ಉತ್ಖನನ ಸ್ಥಳಕ್ಕೆ ಬಿಜೆಪಿ ಮುಖಂಡ ದರಪ್ಪ ನಾಯಕ ಭೇಟಿ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.