ತೆಕ್ಕಲಕೋಟೆ: ಇಲ್ಲಿನ ಕರೂರು ಗ್ರಾಮದ ರೈತ ಬಿ.ಅಮರೇಶ ತಮ್ಮ ಜಮೀನಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಜೋಳದ ಬೆಳೆ ಪಡೆದಿದ್ದಾರೆ, ಆದರೆ ಬೆಳೆ ಸಮೀಕ್ಷೆಯ ತಂತ್ರಾಂಶದಲ್ಲಿ ಮುಂಗಾರು ಜೋಳ ಎಂದು ನಮೂದಾಗಿದ್ದು, ಖರೀದಿ ಕೇಂದ್ರದಲ್ಲಿ ಜೋಳ ಖರೀದಿಸದೇ ಇರುವುದರಿಂದ ರೈತನನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
‘ಕೃಷಿ ಅಧಿಕಾರಿಗಳು ಕಳೆದ ವರ್ಷವೂ ಇದೇ ರೀತಿ ಬೆಳೆ ನಮೂದು ಮಾಡಿದ್ದು, ಈ ವರ್ಷವೂ ತಪ್ಪು ನಮೋದಿಸಿ ಜೋಳ ಮಾರಾಟ ಮಾಡಲು ಪರದಾಡುವಂತಾಗಿದೆ’ ಎಂದು ರೈತ ಅಮರೇಶ ಅಳಲು ತೋಡಿಕೊಂಡರು.
ಕೃಷಿ ಅಧಿಕಾರಿ ಪರಮೇಶ್ವರರೆಡ್ಡಿ ಬೆಳೆ ಕಾಲಂನಲ್ಲಿ ಹಿಂಗಾರು ಬದಲಾಗಿ ಮುಂಗಾರು ಎಂದು ನಮೂದಾಗಿದ್ದು ಜೋಳ ಖರೀದಿಗೆ ನೋಂದಾಯಿಸಲು ಬರುವುದಿಲ್ಲ. ಇದರಿಂದ ಸಾಕಷ್ಟು ರೈತರಿಗೆ ಅನ್ಯಾಯವಾಗಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಬೇಕೆಂದು ರೈತ ಬಿ.ಅಮರೇಶ ಒತ್ತಾಯಿಸಿದ್ದಾರೆ.
‘ತಂತ್ರಾಂಶದಲ್ಲಿ ಬೆಳೆ ನೋಂದಣಿ ಸಮಯದಲ್ಲಿ ಆಗಿರುವ ಗೊಂದಲದಿಂದಾಗಿ ಈ ಸಮಸ್ಯೆ ಉಂಟಾಗಿದೆ, ಇನ್ನು ಮುಂದೆ ಇಂತಹ ಸಮಸ್ಯೆ ಮರುಕಳಿಸದಂತೆ ಕ್ರಮ ವಹಿಸಲಾಗುವುದು’ ಎಂದು ಸಿರುಗುಪ್ಪ ಪ್ರಭಾರ ತಹಶೀಲ್ದಾರ್ ನರಸಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.