ADVERTISEMENT

ಠಾಕ್ರೆ ಹಂಪಿಗೆ ಬಂದ ನೆನಪು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ನವೆಂಬರ್ 2019, 19:30 IST
Last Updated 29 ನವೆಂಬರ್ 2019, 19:30 IST
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು 2016ರ ಫೆಬ್ರುವರಿಯಲ್ಲಿ ಹಂಪಿಯ ಮಾಲ್ಯವಂತಕ್ಕೆ ಭೇಟಿ ನೀಡಿ, ಅಲ್ಲಿ ಫೋಟೊಗ್ರಫಿ ಮಾಡಿದ್ದರು. ಐದು ಜನ ಅವರ ಕ್ಯಾಮೆರಾ ಪರಿಕರಗಳನ್ನು ಹಿಡಿದುಕೊಂಡು ಅವರಿಗೆ ನೆರವಾದರುಸಂಗ್ರಹ ಚಿತ್ರ: ರಾಚಯ್ಯ ಎಸ್‌. ಸ್ಥಾವರಿಮಠ
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು 2016ರ ಫೆಬ್ರುವರಿಯಲ್ಲಿ ಹಂಪಿಯ ಮಾಲ್ಯವಂತಕ್ಕೆ ಭೇಟಿ ನೀಡಿ, ಅಲ್ಲಿ ಫೋಟೊಗ್ರಫಿ ಮಾಡಿದ್ದರು. ಐದು ಜನ ಅವರ ಕ್ಯಾಮೆರಾ ಪರಿಕರಗಳನ್ನು ಹಿಡಿದುಕೊಂಡು ಅವರಿಗೆ ನೆರವಾದರುಸಂಗ್ರಹ ಚಿತ್ರ: ರಾಚಯ್ಯ ಎಸ್‌. ಸ್ಥಾವರಿಮಠ   

ಹೊಸಪೇಟೆ: ಗುರುವಾರ (ನ.28) ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಉದ್ಧವ್‌ ಠಾಕ್ರೆ ಅವರಿಗೂ ವಿಶ್ವ ಪಾರಂಪರಿಕ ತಾಣ ಹಂಪಿಗೂ ಅವಿನಾಭಾವ ಸಂಬಂಧವಿದೆ.

ರಾಜಕಾರಣಿ ಜತೆಗೆ ಹವ್ಯಾಸಿ ಛಾಯಾಗ್ರಾಹಕರೂ ಆಗಿರುವ ಉದ್ಧವ್‌ ಠಾಕ್ರೆ ಅವರು ಹಲವು ಸಲ ತಾಲ್ಲೂಕಿನ ಹಂಪಿಗೆ ಬಂದು ಹೋಗಿದ್ದಾರೆ.

2016ರ ಫೆಬ್ರುವರಿಯಲ್ಲಿ ಕೊನೆಯ ಬಾರಿಗೆ ಅವರು ಹಂಪಿಗೆ ಭೇಟಿ ಕೊಟ್ಟಿದ್ದರು. ಮೂರು ದಿನಗಳ ಕಾಲ ಅವರು ಹಂಪಿ ರಸ್ತೆಯಲ್ಲಿರುವ ವಿಜಯಶ್ರೀ ಹೆರಿಟೇಜ್‌ನಲ್ಲಿ ತಂಗಿದ್ದರು. ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಹಂಪಿಗೆ ಹೋಗಿ ಅಲ್ಲಿ ಫೋಟೊಗ್ರಫಿ ಮಾಡುತ್ತಿದ್ದರು.

ADVERTISEMENT

ನಾಲ್ಕೈದು ಅತ್ಯಾಧುನಿಕ ಕ್ಯಾಮೆರಾಗಳ ಜತೆಗೆ ಅವರು ಬಂದಿದ್ದರು. ಅವರು ಹೋದಲೆಲ್ಲಾ ಅವುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಅವರು ಹೋದ ಕಡೆಗಳಲೆಲ್ಲಾ ನಾಲ್ಕೈದು ಜನ ಅವರೊಂದಿಗೆ ಕ್ಯಾಮೆರಾಗಳನ್ನು ಹಿಡಿದುಕೊಂಡು ಅವರ ಹಿಂದೆ ಹೆಜ್ಜೆ ಹಾಕುತ್ತಿದ್ದರು. ಆಯಾ ಸ್ಥಳದಲ್ಲಿ ಒಂದೊಂದು ಕ್ಯಾಮೆರಾ ನೆರವಿನೊಂದಿಗೆ ಹಂಪಿಯ ಪರಿಸರ, ಸ್ಮಾರಕಗಳನ್ನು ಸೆರೆ ಹಿಡಿಯುತ್ತಿದ್ದರು.

ಹಂಪಿ ರಘುನಾಥ ಮಾಲ್ಯವಂತ, ಮಾತಂಗ, ಹೇಮಕೂಟ ಸೇರಿದಂತೆ ಹಲವು ಸ್ಥಳಗಳಿಗೆ ಸುತ್ತಾಡಿ ಛಾಯಾಗ್ರಹಣ ಮಾಡಿದ್ದರು. ಅವರು ಹೋದಲೆಲ್ಲಾ ಭಾರಿ ಭದ್ರತೆ ಕಲ್ಪಿಸಲಾಗಿತ್ತು. ಅವರು ಫೋಟೊಗ್ರಫಿ ಮಾಡುವಾಗ ಸಾರ್ವಜನಿಕರನ್ನು ಆ ಸ್ಥಳದಲ್ಲಿ ಓಡಾಡಲು ಬಿಡುತ್ತಿರಲಿಲ್ಲ.

ಭದ್ರತೆಯ ಕಾರಣಕ್ಕಾಗಿಯೇ ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಅವರು ನೇರವಾಗಿ ಕಾರಿನಲ್ಲಿಯೇ ಹೋಗಿದ್ದರು. ಹೊಗೆಯಿಂದ ಸ್ಮಾರಕಗಳು ಕಳೆಗುಂದದಿರಲಿ ಎಂದು ಆ ಪ್ರದೇಶದಲ್ಲಿ ವಾಹನಗಳ ಓಡಾಟದ ಮೇಲೆ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ನಿರ್ಬಂಧ ಹೇರಿದೆ. ಪ್ರವಾಸಿಗರು ಅಲ್ಲಿಗೆ ಹೋಗಬೇಕಾದರೆ ಬ್ಯಾಟರಿಚಾಲಿತ ವಾಹನಗಳಲ್ಲಿ ಹೋಗಬಹುದು.

‘ಉದ್ಧವ್‌ ಠಾಕ್ರೆ ಅವರೊಬ್ಬ ಒಳ್ಳೆಯ ಹವ್ಯಾಸಿ ಛಾಯಾಗ್ರಾಹಕ. ದೇಶ–ವಿದೇಶಗಳ ಅನೇಕ ಸ್ಥಳಗಳನ್ನು ಸುತ್ತಿ ಛಾಯಾಗ್ರಹಣ ಮಾಡಿದ್ದಾರೆ. ಅವರು ಹಂಪಿಗೆ ಬಂದು ಮೂರು ದಿನ ಫೋಟೊಗ್ರಫಿ ಮಾಡಿದ್ದರು. 2016ರ ಫೆಬ್ರುವರಿಯಲ್ಲಿ ಅವರು ಹಂಪಿಗೆ ಬಂದಾಗ ಭದ್ರತೆಯ ಕಾರಣಕ್ಕಾಗಿ ಅವರ ಬಳಿ ಹೋಗಲು ನನಗೆ ಬಿಡಲಿಲ್ಲ. ದೂರದಿಂದಲೇ ಅವರ ಛಾಯಾಚಿತ್ರ ಸೆರೆಹಿಡಿದ ನೆನಪು ಈಗಲೂ ಇದೆ. ಅದಕ್ಕೂ ಮೊದಲು ಹಂಪಿಗೆ ಅನೇಕ ಸಲ ಬಂದು ಹೋಗಿದ್ದಾರೆ’ ಎಂದು ಹವ್ಯಾಸಿ ಛಾಯಾಗ್ರಾಹಕ ರಾಚಯ್ಯ ಎಸ್‌. ಸ್ಥಾವರಿಮಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.