ADVERTISEMENT

ಪ್ರವಾಸಿಗರ ನೆಮ್ಮದಿ ಕೆಡಿಸಿದ್ದ ಕಳ್ಳ ಅಂದರ್‌

ಹಂಪಿಯಲ್ಲಿ ಕಾರಿನ ಗಾಜು ಒಡೆದು, ಅಮೂಲ್ಯ ವಸ್ತು ಕಳ್ಳತನ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 14:47 IST
Last Updated 16 ಡಿಸೆಂಬರ್ 2018, 14:47 IST

ಹೊಸಪೇಟೆ: ಹಂಪಿಯಲ್ಲಿ ಪ್ರವಾಸಿಗರ ಕಾರಿನ ಗಾಜು ಒಡೆದು ಅಮೂಲ್ಯವಾದ ವಸ್ತುಗಳನ್ನು ಕದ್ದೊಯ್ಯುತ್ತಿದ್ದ ಕಳ್ಳನನ್ನು ಇಲ್ಲಿನ ಹಂಪಿ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ದಾವಣಗೆರೆಯ ವೀರೇಶ ಬಂಧಿತ. ‘ಹಂಪಿ ಅಕ್ಕ–ತಂಗಿ ಗುಡ್ಡದ ಸಮೀಪ ವೀರೇಶ ಭಾನುವಾರ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ. ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪಿ.ಎಸ್‌.ಐ. ತಿಪ್ಪಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ವೀರೇಶ್‌ ಬಳಿಯಿಂದ ಲ್ಯಾಪ್‌ಟಾಪ್‌, ಟ್ಯಾಬ್‌, ಐಫೋನ್‌, 15 ಗ್ರಾಂ ಚಿನ್ನದ ಬ್ರೆಸ್‌ಲೆಟ್‌, ₨20 ಸಾವಿರ ನಗದು, ಎಲ್‌.ಐ.ಸಿ. ಬಾಂಡ್‌ ವಶಪಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಅಂತರ್ಜಾಲದಲ್ಲಿ ಕಳ್ಳತನದ ಬಗ್ಗೆ ವಿವರ ಕಲೆ ಹಾಕಿದ್ದ ವೀರೇಶ, ಅಮೆಜಾನ್‌ ಆನ್‌ಲೈನ್‌ ಸ್ಟೋರ್‌ನಲ್ಲಿ ಗಾಜು ಒಡೆಯುವ ಸಾಧನವನ್ನು ಖರೀದಿಸಿದ್ದ. ಅದರ ಸಹಾಯದಿಂದ ಕಾರುಗಳ ಗಾಜನ್ನು ಸುಲಭವಾಗಿ ಒಡೆದು, ಅದರಲ್ಲಿದ್ದ ವಸ್ತುಗಳನ್ನು ದೋಚಿಕೊಂಡು ಹೋಗುತ್ತಿದ್ದ. ರಾಣೆಬೆನ್ನೂರು, ಕುಂದಾಪುರ, ಹುಬ್ಬಳ್ಳಿಯಲ್ಲಿ ಇಂತಹುದೇ ದುಷ್ಕೃತ್ಯ ಎಸಗಿದ ಈತನ ವಿರುದ್ಧ ಪ್ರಕರಣ ದಾಖಲಾಗಿವೆ. ಮೂರ್ನಾಲ್ಕು ತಿಂಗಳು ಜೈಲು ಶಿಕ್ಷೆ ಕೂಡ ಅನುಭವಿಸಿದ್ದಾನೆ. ಆದರೆ, ಹಳೆ ಚಾಳಿ ಮಾತ್ರ ಬಿಟ್ಟಿರಲಿಲ್ಲ’ ಎಂದು ವಿವರಿಸಿದರು.

ನ. 21ರಂದು ಹಂಪಿ ನೆಲಸ್ತರ ಶಿವ ದೇವಾಲಯದ ಬಳಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್‌, ಮೊಬೈಲ್‌ ಕಳ್ಳತನ ಮಾಡಿದ್ದ. ಡಿವೈಎಸ್‌ಪಿ ಬಿ.ಎಸ್‌. ತಳವಾರ ಮಾರ್ಗದರ್ಶನದಲ್ಲಿ ಪಿ.ಎಸ್‌.ಐ. ತಿಪ್ಪಣ್ಣ ಅವರು ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಹಂಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.