ADVERTISEMENT

ಟಿಪ್ಪು ಜಯಂತಿ; ಮೆರವಣಿಗೆಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 9:42 IST
Last Updated 9 ನವೆಂಬರ್ 2018, 9:42 IST
ಹೊಸಪೇಟೆಯಲ್ಲಿ ಶುಕ್ರವಾರ ನಡೆದ ಟಿಪ್ಪು ಸುಲ್ತಾನ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಪಿ.ಎನ್. ಲೋಕೇಶ್ ಮಾತನಾಡಿದರು–ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಶುಕ್ರವಾರ ನಡೆದ ಟಿಪ್ಪು ಸುಲ್ತಾನ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಪಿ.ಎನ್. ಲೋಕೇಶ್ ಮಾತನಾಡಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ‘ಸರ್ಕಾರದ ನಿರ್ದೇಶನದ ಪ್ರಕಾರ ಇದೇ 10ರಂದು ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಲಾಗುವುದು. ಆದರೆ, ಯಾರು ಕೂಡ ಮೆರವಣಿಗೆ, ಪ್ರತ್ಯೇಕ ಸಭೆ–ಸಮಾರಂಭ ನಡೆಸುವಂತಿಲ್ಲ’ ಎಂದು ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್ ತಿಳಿಸಿದರು.

ಟಿಪ್ಪು ಜಯಂತಿ ಪ್ರಯುಕ್ತ ಶುಕ್ರವಾರ ಇಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಇದು ಸರ್ಕಾರಿ ಕಾರ್ಯಕ್ರಮ. ಜಯಂತಿಗೆ ಪರ–ವಿರೋಧ ವ್ಯಕ್ತವಾಗಿದೆ. ಯಾರು ಕೂಡ ಕಾನೂನಿನ ಚೌಕಟ್ಟು ಮೀರಿ ವರ್ತಿಸಬಾರದು. ಮೆರವಣಿಗೆ ನಡೆಸಬಾರದು. ಸರಳ ಹಾಗೂ ಶಾಂತಿಯುತವಾಗಿ ಜಯಂತಿ ಆಚರಿಸಲು ಸಹಕಾರ ನೀಡಬೇಕು’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಸಮಾಜದ ಮುಖಂಡರಲ್ಲಿ ಮನವಿ ಮಾಡಿದರು.

‘ಬೆಳಿಗ್ಗೆ 9ಕ್ಕೆ ಟಿಪ್ಪು ಸುಲ್ತಾನ್‌ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಚಂದ್ರಶೇಖರ್‌ ಶಾಸ್ತ್ರಿಯವರು ಉಪನ್ಯಾಸ ನೀಡುವರು. ಶಿಷ್ಟಾಚಾರದ ಪ್ರಕಾರ ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ಜತೆಗೆ ಮುಸ್ಲಿಂ ಸಮಾಜದ ಕೆಲವು ಮುಖಂಡರನ್ನು ವೇದಿಕೆಯಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.

ADVERTISEMENT

ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ನಗರಸಭೆ ಪೌರಾಯುಕ್ತ ವಿ. ರಮೇಶ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ, ಡಿ.ವೈ.ಎಸ್‌.ಪಿ. ಲಕ್ಷ್ಮಿನಾರಾಯಣ, ಹಂಪಿ ಡಿ.ವೈ.ಎಸ್‌.ಪಿ. ಕೆ. ತಳವಾರ್‌, ಮುಸ್ಲಿಂ ಸಮಾಜದ ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಅಬ್ದುಲ್‌ ರಫಾಯ್‌, ಮೊಹಮ್ಮದ್‌ ಮುನೀರ್‌, ಫಹೀಮ್‌ ಬಾಷಾ, ಬಡಾವಲಿ, ಸಲೀಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.