ADVERTISEMENT

ಮತದಾರರ ಪತ್ತೆ ಹಚ್ಚುವುದೇ ಸವಾಲು

ಎ.ಎಂ.ಸೋಮಶೇಖರಯ್ಯ
Published 8 ನವೆಂಬರ್ 2019, 17:45 IST
Last Updated 8 ನವೆಂಬರ್ 2019, 17:45 IST

ಕೂಡ್ಲಿಗಿ: ವಾರ್ಡ್‌ವಾರು ಮತಗಳ ಪುನರ್‌ ಹಂಚಿಕೆ ಮಾಡಿರುವುದರಿಂದ ಪಟ್ಟಣ ಪಂಚಾಯಿತಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಮತದಾರರನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿದೆ.

20 ವಾರ್ಡ್‌ಗಳಲ್ಲಿ ಒಟ್ಟು 21,233 ಮತದಾರರು ಇದ್ದಾರೆ. ಪ್ರತಿ ವಾರ್ಡಿನಲ್ಲಿ ಸರಾಸರಿ ಮತಗಳಿವೆ. ಈ ಹಿಂದೆ ಇದು ಏರುಪೇರಾಗಿತ್ತು. ಒಂದು ವಾರ್ಡಿನಲ್ಲಿ 600 ಮತದಾರರಿದ್ದರೆ, ಇನ್ನೊಂದು ವಾರ್ಡಿನಲ್ಲಿ 1,500ಕ್ಕೂ ಹೆಚ್ಚು ಮತದಾರರಿದ್ದರು. ಈಗ ಅದನ್ನು ಸರಾಸರಿಯಾಗಿದೆ.

ಬೇರೆ ಬೇರೆ ವಾರ್ಡುಗಳಲ್ಲಿ ಮತದಾರರ ಹೆಸರು ಹಂಚಿ ಹೋಗಿವೆ. ಕೆಲವು ಕಡೆಗಳಂತೂ ಒಂದೇ ಕುಟುಂಬದವರ ಹೆಸರುಗಳು ಎರಡ್ಮೂರು ವಾರ್ಡುಗಳಲ್ಲಿ ಸೇರಿಕೊಂಡಿವೆ. ಈಗ ಅಂಥವರ ಮಾಹಿತಿ ಕಲೆ ಹಾಕಿ, ಅವರನ್ನು ತಲುಪಬೇಕಾದ ಸವಾಲು ಅಭ್ಯರ್ಥಿಗಳು ಎದುರಿಸುತ್ತಿದ್ದಾರೆ.

ADVERTISEMENT

ಮತದಾರರ ಮಾಹಿತಿ ಕಲೆ ಹಾಕಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಚುನಾವಣೆಗೆ ದಿನಾಂಕ ಸಮೀಪಿಸುತ್ತಿದ್ದು, ಎಲ್ಲಾ ಮತದಾರರನ್ನು ತಲುಪಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.

ತ್ರಿಕೋನ ಸ್ಪರ್ಧೆ:

ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆ.ಡಿ.ಎಸ್‌. ಪಕ್ಷಗಳು ತಲಾ 18 ವಾರ್ಡುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ವಿಧಾನ ಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆದ್ದಿರುವ ಬಿಜೆಪಿಗೆ ಸ್ಥಳೀಯ ಆಡಳಿತ ವಶಪಡಿಸಿಕೊಳ್ಳುವ ಪ್ರತಿಷ್ಠೆ ಎದುರಾಗಿದೆ. ಕಾಂಗ್ರೆಸ್‌ ಹಾಗೂ ಜೆ.ಡಿ.ಎಸ್‌. ಭರದ ಪ್ರಚಾರದಲ್ಲಿ ತೊಡಗಿದ್ದು, ಅಧಿಕಾರಕ್ಕೇರಲು ಶ್ರಮಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.