ADVERTISEMENT

ಪಂಚಾಯಿತಿ ಸದಸ್ಯರಿಗೆ ಸಾಕ್ಷರ ಶಿಬಿರ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 14:33 IST
Last Updated 22 ಜುಲೈ 2019, 14:33 IST
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ ಅವರು ಸಸಿಗೆ ನೀರೆರೆದು ಶಿಬಿರಕ್ಕೆ ಚಾಲನೆ ನೀಡಿದರು
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ ಅವರು ಸಸಿಗೆ ನೀರೆರೆದು ಶಿಬಿರಕ್ಕೆ ಚಾಲನೆ ನೀಡಿದರು   

ಹೊಸಪೇಟೆ: ಗ್ರಾಮ ಪಂಚಾಯಿತಿ ಸದಸ್ಯರಿಗೆ ಎಲ್ಲ ಇಲಾಖೆಗಳ ಮಾಹಿತಿ ಒದಗಿಸುವ 21 ದಿನಗಳ ಸಾಕ್ಷರ ಶಿಬಿರ ಸೋಮವಾರ ನಗರದಲ್ಲಿ ಆರಂಭಗೊಂಡಿತು.

ಶಿಬಿರ ಉದ್ಘಾಟಿಸಿದ ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿ ಅಧಿಕಾರಿ ಮೌನೇಶ ಬಡಿಗೇರ, ‘ಅನೇಕ ಜನ ಗ್ರಾಮ ಪಂಚಾಯಿತಿಗೆ ಹೊಸದಾಗಿ ಆಯ್ಕೆಯಾಗಿರುತ್ತಾರೆ. ಕೆಲವರು ಕಾರಣಾಂತರಗಳಿಂದ ಶಿಕ್ಷಣ ಪಡೆಯುವುದಿಲ್ಲ. ಯಾವ ಇಲಾಖೆ ಯಾವ ಕೆಲಸ ಮಾಡುತ್ತದೆ ಎನ್ನುವುದು ಗೊತ್ತಿರುವುದಿಲ್ಲ. ಈ ಎಲ್ಲ ವಿಚಾರಗಳನ್ನು ಶಿಬಿರದಲ್ಲಿ ತಿಳಿಸಿಕೊಡಲಾಗುತ್ತದೆ. ಇದರಿಂದ ಅವರು ಪಂಚಾಯಿತಿ ಸಭೆಯಲ್ಲಿ ಪರಿಣಾಮಕಾರಿ ಮಾತನಾಡಿ, ಆಯಾ ಇಲಾಖೆಯ ಪ್ರಗತಿ ಕುರಿತು ಮಾಹಿತಿ ಪಡೆಯಲು ಸಹಾಯವಾಗುತ್ತದೆ’ ಎಂದು ಹೇಳಿದರು.

‘ಈಗಾಗಲೇ ಜಿಲ್ಲೆಯ ಸಂಡೂರು, ಸಿರುಗುಪ್ಪದಲ್ಲಿ ಈ ರೀತಿಯ ಶಿಬಿರವನ್ನು ನಡೆಸಲಾಗಿದೆ. ಅಲ್ಲಿನ ಸದಸ್ಯರು ಭಾಗವಹಿಸಿ ಅದರ ಪ್ರಯೋಜನ ಪಡೆದುಕೊಂಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯದಲ್ಲಿ ಶೇ 75ರಷ್ಟು ಸಾಕ್ಷರತೆ ಇದೆ. ಬಳ್ಳಾರಿ ಜಿಲೆಯಲ್ಲಿ ಶೇ 68 ಸಾಕ್ಷರತೆ ಪ್ರಮಾಣ ಇದೆ. ಅದನ್ನು ಶೇ 95ರಷ್ಟು ಮಾಡುವ ಗುರಿ ಹಾಕಿಕೊಳ್ಳಲಾಗಿದೆ‘ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ, ಉಪಾಧ್ಯಕ್ಷ ಎಂ.ಶಿವಪ್ಪ, ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕುಮಾರ, ತಾಲ್ಲೂಕು ವಯಸ್ಕರ ಶಿಕ್ಷಣ ಸಮಿತಿ ಅಧಿಕಾರಿ ವರಪ್ರಸಾದರಾವ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.