
ಸಂಡೂರು: ತಾಲ್ಲೂಕಿನ ಚೋರುನೂರು ಗ್ರಾಮದಲ್ಲಿ ಸುಡುಗಾಡುಸಿದ್ದರು ಸ್ವಂತ ಸೂರಿಲ್ಲದೆ ಪ್ರಾಣಿಗಳಿಗಿಂತ ಕಡೆಯಾಗಿ ಜೀವನ ನಡೆಸುತ್ತಿದ್ದಾರೆ.
ಗ್ರಾಮದ ಬೀದಿ ಬದಿ, ಖಾಸಗಿ ಜಮೀನುಗಳಲ್ಲಿ ಮೂವತ್ತಕ್ಕೂ ಹೆಚ್ಚು ಕುಟುಂಬಗಳು ಹಲವಾರು ವರ್ಷಗಳಿಂದ ನೆಲೆಸಿವೆ. ಹಳೆಯ ಸೀರೆಗಳು, ಹರಿದ ಟಾರ್ಪಲಿನ್, ಬಿದಿರುಗಳಿಂದ ಗುಡಿಸಲು ಹಾಕಿಕೊಂಡು ಕನಿಷ್ಠ ಸೌಲಭ್ಯಗಳೂ ಇಲ್ಲದೇ ಬದುಕುತ್ತಿವೆ.
ಈ ಕುಟುಂಬಗಳು ಖಾಸಗಿ ಕೊಳವೆ ಬಾವಿ, ಬೀದಿ ನಳಗಳಿಂದ ನೀರು ಹೊಂದಿಸಿಕೊಂಡು ಬರುತ್ತವೆ. ದೂರದ ವಿದ್ಯುತ್ ಕಂಬಗಳಿಂದ ತಂತಿ ಎಳೆದುಕೊಂಡು ವಿದ್ಯುತ್ ಸಂಪರ್ಕ ಪಡೆದುಕೊಂಡಿವೆ. ಮಹಿಳೆಯರು, ಮಕ್ಕಳ ಹಾದಿಯಾಗಿ ಪ್ರತಿಯೊಬ್ಬರು ಶೌಚಕ್ಕೆ ಬಯಲು ಆಶ್ರಯಿಸಿದ್ದಾರೆ. ಹರಿದ ಸಿರೆಗಳನ್ನು ಕಟ್ಟಿಕೊಂಡು ಬಚ್ಚಲು ಮನೆ ಮಾಡಿಕೊಂಡಿದ್ದಾರೆ. ಹೀಗಾಗಿ ನಾಗರಿಕ ಸವಲತ್ತುಗಳೆಂಬುದೇ ಇವರಿಗೆ ಮರೀಚಿಕೆಯಾಗಿದೆ. ಹೀಗಿರುವ ಈ ಸಮುದಾಯಕ್ಕೆ ಸರ್ಕಾರದ ಯಾವ ಯೋಜನೆಗಳೂ ವಸತಿ ವ್ಯವಸ್ಥೆ, ಮೂಲಸೌಕರ್ಯ ಕಲ್ಪಿಸಿಲ್ಲ.
ನಂಜುಡಪ್ಪ ವರದಿ ಪ್ರಕಾರ ಸಂಡೂರು ಹಿಂದುಳಿದ ತಾಲ್ಲೂಕಾಗಿದ್ದರೂ, ನೈಸರ್ಗಿಕವಾಗಿ ಸಂಪದ್ಭರಿತ ಪ್ರದೇಶ. ನಿತ್ಯ ಕೋಟ್ಯಂತರ ರೂಪಾಯಿಗಳ ವಹಿವಾಟು ಇಲ್ಲಿನ ಗಣಿಗಳು ಮತ್ತು ಕಬ್ಬಿಣ ಕಾರ್ಖಾನೆಗಳಿಂದ ನಡೆಯುತ್ತದೆ. ಡಿಎಂಎಫ್, ಕೆಎಂಇಆರ್‌ಸಿ ಅನುದಾನವಿದೆ. ಆದರೆ ಇಂಥ ತಳ ಸಮುದಾಯಗಳು ಮಾತ್ರ ಸೌಲಭ್ಯ ವಂಚಿತವಾಗಿ ಬದುಕುತ್ತಿವೆ.
ನಿರ್ಲಕ್ಷಿತ ಸಮುದಾಯಕ್ಕೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸದೇ ಇರುವುದಕ್ಕೆ ಕ್ಷೇತ್ರದ ಜನ ಪ್ರತಿನಿಧಿಗಳು, ಜಿಲ್ಲಾಡಳಿತದ ವಿರುದ್ಧ ಸಮುದಾಯದ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಸಮುದಾಯವನ್ನು ಕೇವಲ ಮತಕ್ಕಾಗಿ ಬಳಿಸಿಕೊಳ್ಳುವುದು ಎಷ್ಟು ಸರಿ? ಎಂದು ಸಮುದಾಯದ ಮುಖಂಡರಾದ ಅಜಯ್, ವೆಂಕಟೇಶ್, ಗೌರಮ್ಮ, ಮಾರೆವ್ವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಡೂರಿನ ತಾಲ್ಲೂಕು ಆಡಳಿತದದಿಂದ ಸುಡುಗಾಡು ಸಿದ್ದರ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸಲು 2023ರಲ್ಲಿ ವಡ್ಡಿನಕಟ್ಟೆ ಕೆರೆಯ ಬಳಿ ಒಂದು ಎಕರೆ ಸರ್ಕಾರಿ ಜಮೀನನ್ನು ಗುರುತಿಸಲಾಗಿತ್ತು. ಆದರೆ, ಈ ವರೆಗೆ ಯಾರಿಗೂ ವಸತಿ ಸಿಕ್ಕಿಲ್ಲ.
ಸುಡುಗಾಡು ಸಿದ್ದರ ವಾಸದ ಟೆಂಟ್‍ಗಳಿಗೆ ಹೊದಿಸಲು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಉಚಿತ ಟಾರ್ಪಲಿನ್ ನೀಡಲಾಗುತ್ತದೆ. ಆದರೆ, ಸ್ಥಳೀಯ ಅಧಿಕಾರಿಗಳು ಸಕಾಲಕ್ಕೆ ವಿತರಣೆ ಮಾಡುತ್ತಿಲ್ಲ. ಅಧಿಕಾರಿಗಳು ತಕ್ಷಣ ಟಾರ್ಪಲಿನ್‌ಗಳನ್ನು ವಿತರಿಸಬೇಕು ಎಂದು ಸುಡುಗಾಡು ಸಿದ್ಧರ ಕುಟುಂಬಗಳು ಒತ್ತಾಯಿಸಿವೆ.
ಐವತ್ತು ವರ್ಷಗಳಿಂದ ಚೋರುನೂರು ಗ್ರಾಮದಲ್ಲೇ ನೆಲೆಸಿದ್ದೇವೆ. ಸರ್ಕಾರ ನಮಗೆ ಇಲ್ಲಿಯವರೆಗೂ ವಾಸಕ್ಕಾಗಿ ಯಾವುದೇ ಸೂರು ಕಲ್ಪಿಸಿಲ್ಲ. ಗ್ರಾಮದಲ್ಲಿ ಹಲವರಿಗೆ ನಿವೇಶನ ವಸತಿ ನೀಡಲಾಗಿದೆ. ನಾವು ಅಧಿಕಾರಿ ಜನಪ್ರತಿನಿಧಿಗಳ ಕಣ್ಣಿಗೆ ಕಾಣುತ್ತಿಲ್ಲವೇ ನಮಗೆ ಎಲ್ಲರಂತೆ ಸಮಾನವಾಗಿ ಬದುಕುವ ಹಕ್ಕು ಇಲ್ಲವೇ? ಸರ್ಕಾರ ನಮ್ಮತ್ತ ನೋಡಬೇಕು.ಗಂಗಜ್ಜ ಸಮುದಾಯದ ಮುಖಂಡ
ಸುಡುಗಾಡು ಸಿದ್ದರ ಸಮುದಾದ ನಿವೇಶನ ವಸತಿಗಾಗಿ ಈಗಾಗಲೇ ಸರ್ಕಾರದಿಂದ ಒಂದು ಎಕರೆ ಜಮೀನನ್ನು ನಿಗದಿ ಮಾಡಲಾಗಿದೆ. ಅಲ್ಲಿ ವಸತಿ ನಿರ್ಮಾಣ ಸೇರಿದಂತೆ ಇತರೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಬಳಿ ಚರ್ಚಿಸಲಾಗುವುದು.ಅನಿಲ್ ಕುಮಾರ್ ಜಿ. ಸಂಡೂರು ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.