ಕಂಪ್ಲಿ ಕೋಟೆ ಬಳಿಯ ತುಂಗಭದ್ರಾ ನದಿ ಪ್ರವಾಹ ಇಳಿಕೆಯಾಗಿದ್ದು, ಸಂಪರ್ಕ ಸೇತುವೆ ಮೇಲೆ ಬುಧವಾರ ಮಧ್ಯಾಹ್ನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು
ಕಂಪ್ಲಿ: ಇಲ್ಲಿಯ ಕೋಟೆ ಬಳಿಯ ತುಂಗಭದ್ರಾ ನದಿ ಪ್ರವಾಹ ಇಳಿಮುಖವಾಗಿದ್ದು, ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮೇಲೆ ಬುಧವಾರ ಮಧ್ಯಾಹ್ನದಿಂದ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಜು.27ರಂದು ಜಲಾಶಯದಿಂದ 1ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಬಿಟ್ಟಿದ್ದರಿಂದ, ಸೇತುವೆ ಸಂಪರ್ಕ ಕಡಿತಗೊಂಡಿತ್ತು. ಗಂಗಾವತಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇತುವೆ ಪರಿಶೀಲಿಸಿದ ಬಳಿಕ ಅನುಮತಿ ನೀಡಲಾಯಿತು.
ತಾಲ್ಲೂಕಿನ ಸಣಾಪುರ, ಇಟಗಿ ಗ್ರಾಮದ ನದಿ ದಂಡೆ ಪಕ್ಕದ ಪಂಪ್‍ಸೆಟ್‍ಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿದ್ದ ರೈತರು ನೀರು ಕಡಿಮೆಯಾಗುತ್ತಿದ್ದಂತೆ ಮತ್ತೆ ದಂಡೆ ಪಕ್ಕದಲ್ಲಿ ಮರುಜೋಡಿಸುವಲ್ಲಿ ಮಗ್ನರಾಗಿರುವುದು ಕಂಡುಬಂತು.
ಕಂಪ್ಲಿ ಭಾಗದ ಕೆಲ ರೈತರ ಹೊಲ ಗದ್ದೆಗಳು ಗಂಗಾವತಿ ತಾಲ್ಲೂಕಿನ ಚಿಕ್ಕಜಂತಕಲ್ಲು ಮಾಗಾಣಿ ಪ್ರದೇಶದಲ್ಲಿದ್ದು, ಸೇತುವೆ ಮೇಲೆ ನೀರು ಹರಿಯುತ್ತಿದ್ದರಿಂದ ಮೂರು ದಿನಗಳಿಂದ ತೆರಳಿರಲಿಲ್ಲ.
ಸೇತುವೆ ಮೇಲೆ ಸಂಚರಿಸಲು ಅವಕಾಶ ಕಲ್ಪಿಸಿದ್ದರಿಂದ ಹೊಲ ಗದ್ದೆಗಳ ಕಡೆ ಹೆಜ್ಜೆ ಹಾಕಿದರು. ಸೇತುವೆ ಅಕ್ಕಪಕ್ಕ ಸಿಲುಕಿದ್ದ ಭಾರಿ ತ್ಯಾಜ್ಯ, ಜಲಸಸ್ಯಗಳನ್ನು ಪುರಸಭೆ ಸಿಬ್ಬಂದಿ ಜೆಸಿಬಿ ಯಂತ್ರ ಬಳಸಿ ತೆರವುಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.