ADVERTISEMENT

ದೇವದಾಸಿಯರಿಂದ ಅಹೋರಾತ್ರಿ ಧರಣಿ

ರಾಜ್ಯದಾದ್ಯಂತ ಸಮೀಕ್ಷೆ, ಕೃಷಿ ಜಮೀನಿಗೆ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 10:20 IST
Last Updated 12 ಸೆಪ್ಟೆಂಬರ್ 2019, 10:20 IST
ದೇವದಾಸಿಯರನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಅಧ್ಯಕ್ಷೆ ಕೆ. ನಾಗರತ್ನಮ್ಮ ಮಾತನಾಡಿದರು–ಪ್ರಜಾವಾಣಿ ಚಿತ್ರ
ದೇವದಾಸಿಯರನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಅಧ್ಯಕ್ಷೆ ಕೆ. ನಾಗರತ್ನಮ್ಮ ಮಾತನಾಡಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ದೇವದಾಸಿಯರಿಗೆ ನಿವೇಶನ ನೀಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘವು ಇದೇ 17,18ರಂದು ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದೆ.

ಗುರುವಾರ ನಗರದ ಶ್ರಮಿಕ ಭವನದಲ್ಲಿ ನಡೆದ ದೇವದಾಸಿಯರು, ಅವರ ಮಕ್ಕಳನ್ನು ಒಳಗೊಂಡ ಸಂಘದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ಸಭೆ ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾ ಅಧ್ಯಕ್ಷೆ ಕೆ. ನಾಗರತ್ನಮ್ಮ, ‘ದೇವದಾಸಿಯರ ನಿಖರ ಸಂಖ್ಯೆ ಕಲೆ ಹಾಕಲು ಹೋದ ವರ್ಷ ಸರ್ಕಾರ ರಾಜ್ಯದಾದ್ಯಂತ ಸರ್ವೇ ನಡೆಸಿದೆ. ಆದರೆ, ಜಿಲ್ಲೆ ಸೇರಿದಂತೆ ಅನೇಕ ಕಡೆಗಳಲ್ಲಿ ದೇವದಾಸಿಯರ ಹೆಸರು ಕೈಬಿಟ್ಟು ಹೋಗಿವೆ. ಪುನಃ ಸರ್ವೇ ನಡೆಸಿ, ಅವರ ಹೆಸರು ಸೇರಿಸಬೇಕು. ಅಷ್ಟೇ ಅಲ್ಲ, ದೇವದಾಸಿಯರ ಮಕ್ಕಳ ಹೆಸರು ಕೂಡ ಅದರಲ್ಲಿ ಸೇರ್ಪಡೆ ಮಾಡಬೇಕು. ಅನೇಕ ದೇವದಾಸಿಯರು ಮರಣ ಹೊಂದಿದ್ದಾರೆ. ಮಕ್ಕಳ ಹೆಸರು ಸೇರಿಸುವುದರಿಂದ ಸರ್ಕಾರದ ಸೌಲಭ್ಯಗಳು ಅವರಿಗೆ ಸಿಗುತ್ತವೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ದೇವದಾಸಿಯರ ಮಾಸಾಶನ ₹5 ಸಾವಿರಕ್ಕೆ ಹೆಚ್ಚಿಸಬೇಕು. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜೀವನ ನಡೆಸಲು ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಕೆಲವರಿಗೆ ನಿವೇಶನ ಮಂಜೂರು ಮಾಡಲಾಗಿದೆ. ಆದರೆ, ನಿವೇಶನಗಳನ್ನು ಕೊಟ್ಟಿಲ್ಲ. ಕೂಡಲೇ ಜಮೀನು ಗುರುತಿಸಿ, ಅವರಿಗೆ ನಿವೇಶನ ಹಂಚಿಕೆ ಮಾಡಬೇಕು. ಉಪಜೀವನಕ್ಕಾಗಿ ಕೃಷಿ ಜಮೀನು ಕೊಡಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಮಾಡಿಸಿಕೊಡಬೇಕು’ ಎಂದು ಒತ್ತಾಯಿಸಿದರು.

‘ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಕೊಡುವಾಗ ದೇವದಾಸಿಯರು, ಅವರ ಮಕ್ಕಳಿಗೆ ಮೊದಲ ಆದ್ಯತೆ ಕೊಡಬೇಕು. ಅವರ ಮಕ್ಕಳ ಸಂಪೂರ್ಣ ಓದಿನ ಖರ್ಚನ್ನು ಸರ್ಕಾರವೇ ಭರಿಸಬೇಕು. ಅತಿವೃಷ್ಟಿ, ಅನಾವೃಷ್ಟಿಯಿಂದ ಸಂತ್ರಸ್ತರಾದವರಿಗೆ ಸೂರು ಕಲ್ಪಿಸಿ, ಅವರಿಗೆ ಆಸರೆಯಾಗಬೇಕು’ ಎಂದು ಆಗ್ರಹಿಸಿದರು.

ಸಂಘದ ರಾಜ್ಯ ಗೌರವ ಅಧ್ಯಕ್ಷಯು. ಬಸವರಾಜ, ತಾಲ್ಲೂಕು ಅಧ್ಯಕ್ಷೆ ಹಂಪಮ್ಮ, ಕಾರ್ಯದರ್ಶಿ ಯಲ್ಲಮ್ಮ, ಮುಖಂಡ ಆರ್‌. ಭಾಸ್ಕರ್‌ ರೆಡ್ಡಿ, ದೇವದಾಸಿಯರು, ಅವರ ಮಕ್ಕಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.