ADVERTISEMENT

ಉಗ್ರಪ್ಪರಿಂದ ನೀತಿ ಸಂಹಿತೆ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 14:10 IST
Last Updated 17 ಅಕ್ಟೋಬರ್ 2018, 14:10 IST

ಹೊಸಪೇಟೆ: ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪನವರು ಬುಧವಾರ ಸಂಜೆ ಇಲ್ಲಿನ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ರಾಜಕೀಯ ಭಾಷಣ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದರು.

ಮಠದ ಪೀಠಾಧಿಪತಿ ಸಂಗನಬಸವ ಸ್ವಾಮೀಜಿ ಅವರ ದರ್ಶನ ಪಡೆಯಲು ಅವರು ಬಂದಿದ್ದರು. ಆದರೆ, ಈ ವೇಳೆ ಸ್ವಾಮೀಜಿ ಅವರು ಮಠದಲ್ಲಿ ಇರಲಿಲ್ಲ. ಆಗ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣು ಸ್ವಾಮಿ ಅವರು ಉಗ್ರಪ್ಪನವರನ್ನು ಸನ್ಮಾನಿಸಿದರು. ನಂತರ ಉಗ್ರಪ್ಪ ಮಾತನಾಡಿ, ‘ಶ್ರೀರಾಮುಲು ಅವರು ಸಂಸದರಾಗಿ, ಶಾಸಕರಾಗಿ ಬಳ್ಳಾರಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರಿಂದಾಗಿ ಉಪಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ನಾನು ಗೆಲ್ಲುವುದು ಶತಃಸಿದ್ಧ’ ಎಂದರು. ನಂತರ ಮಠದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಶಾಸಕ ಆನಂದ್‌ ಸಿಂಗ್‌ ಸೇರಿದಂತೆ ಕಾಂಗ್ರೆಸ್‌ ಮುಖಂಡರ ದಂಡೇ ಅಲ್ಲಿ ಇತ್ತು.

‘ಉಗ್ರಪ್ಪನವರು ಮಠದ ಆವರಣದಲ್ಲಿ ರಾಜಕೀಯ ಭಾಷಣ ಮಾಡಿದರೆ ಅದು ಖಂಡಿತವಾಗಿಯೂ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಚುನಾವಣಾ ಸಿಬ್ಬಂದಿ ಅದರ ವಿಡಿಯೊ ಮಾಡಿದ್ದಾರೆ. ಅದನ್ನು ಪರಿಶೀಲಿಸಿದ ನಂತರ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.