ADVERTISEMENT

‘ಸಹಕಾರ ರಂಗದಲ್ಲಿ ಹೊಂದಾಣಿಕೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2018, 11:23 IST
Last Updated 14 ಆಗಸ್ಟ್ 2018, 11:23 IST
ಕಾರ್ಯಕ್ರಮದಲ್ಲಿ ಸಹಕಾರ ಭಾರತಿಯ ಎಂ.ಜಿ. ಪಾಟೀಲ ಮಾತನಾಡಿದರು
ಕಾರ್ಯಕ್ರಮದಲ್ಲಿ ಸಹಕಾರ ಭಾರತಿಯ ಎಂ.ಜಿ. ಪಾಟೀಲ ಮಾತನಾಡಿದರು   

ಹೊಸಪೇಟೆ: ಸಹಕಾರ ಭಾರತಿ ಬಳ್ಳಾರಿ ಜಿಲ್ಲಾಮಟ್ಟದ ಅಭ್ಯಾಸ ವರ್ಗ ಮಂಗಳವಾರ ನಗರದಲ್ಲಿ ನಡೆಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌.ಎಸ್‌.ಎಸ್‌.) ಪ್ರಚಾರಕ ಶ್ರೀನಿವಾಸ್‌ ಮಾತನಾಡಿ, ‘ಸಹಕಾರ ಎನ್ನುವುದು ಒಂದು ಜೀವನ ಇದ್ದಂತೆ. ಜೀವನದಲ್ಲಿ ಪರಸ್ಪರ ಸಹಕಾರದಿಂದ ಮುನ್ನಡೆದರೆ ಹೇಗೆ ಯಶಸ್ಸು ಗಳಿಸಲು ಸಾಧ್ಯವೋ ಅದೇ ರೀತಿ ಸಹಕಾರ ರಂಗ ಕೂಡ. ಬದುಕಿನಲ್ಲಿ ಹೊಂದಾಣಿಕೆಯ ಅಗತ್ಯವಿದ್ದರೆ, ಸಹಕಾರ ಕ್ಷೇತ್ರದಲ್ಲಿ ತತ್ವ, ಧ್ಯೇಯ ಪಾಲನೆ ಮುಖ್ಯ’ ಎಂದು ಹೇಳಿದರು.

‘ಸಹಕಾರ ತತ್ವ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈಗ ಅದಕ್ಕೆ ಹೊಸ ಸ್ವರೂಪ ನೀಡಲಾಗಿದೆ. ಹಣ ಇಲ್ಲದಿದ್ದ ಸಂದರ್ಭದಲ್ಲಿ ದವಸ, ಧಾನ್ಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಸ್ವಾವಲಂಬಿ ಜೀವನದ ಜತೆಗೆ ಒಗ್ಗಟ್ಟಿನ ಮಂತ್ರ ಕೂಡ ಜಪಿಸುತ್ತಿದ್ದರು. ಈಗ ಅವುಗಳು ಸ್ವಸಹಾಯ ಗುಂಪುಗಳ ರೂಪ ಪಡೆದುಕೊಂಡಿವೆ’ ಎಂದು ತಿಳಿಸಿದರು.

ADVERTISEMENT

‘ಎಲ್ಲ ಕ್ಷೇತ್ರಗಳಲ್ಲಿ ರಾಷ್ಟ್ರೀಯತೆಯ ಭಾವನೆ ಮೂಡಿದರೆ ಮಾತ್ರ ರಾಷ್ಟ್ರ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ. ಎಲ್ಲರೂ ಸಹಕಾರ, ಸಹಬಾಳ್ವೆಯಿಂದ ಇರಬಹುದು’ ಎಂದರು.

ಸಹಕಾರಿ ಭಾರತಿ ಈ ಹಿಂದಿನ ರಾಜ್ಯ ಘಟಕದ ಅಧ್ಯಕ್ಷ ಎಂ.ಜಿ. ಪಾಟೀಲ ಉದ್ಘಾಟಿಸಿ, ‘ಸಹಕಾರ ಕ್ಷೇತ್ರ ದೊಡ್ಡ ಪ್ರಗತಿ ಸಾಧಿಸಿದ್ದು, ಇನ್ನೂ ಇದರ ಹರವು ವಿಸ್ತರಿಸಬೇಕಿದೆ’ ಎಂದು ಹೇಳಿದರು.

ನಿರ್ದೇಶಕರಾದ ಗುರುನಾಥ ಜಾಂತೀಕರ್‌, ಅನಿಲ್‌ ಜೋಶಿ, ವಿಶ್ವನಾಥ ಪಾಟೀಲ, ಚೊಕ್ಕ ಬಸವನಗೌಡ, ಕೆ. ವೀರಭದ್ರಪ್ಪ, ಜೆ.ಎಂ. ರಮೇಶ್ ಗುಪ್ತಾ, ಜಿ. ಶ್ರೀಧರ್‌, ತಿಮ್ಮಯ್ಯ ಶೆಟ್ಟರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.