ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ
ಕುರುಗೋಡು: ಸಮೀಪದ ಸಿರಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ರೋಗಿಗಳಿಗೆ ಸಕಾಲಕ್ಕೆ ಸೇವೆ ಸಿಗದಂತಾಗಿದೆ ಎಂಬ ಆರೋಪ ಕೇಳಿಬಂದಿದೆ.
ಗ್ರಾಮದಲ್ಲಿ 1961ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಲಾಗಿತ್ತು. ಇದರ ವ್ಯಾಪ್ತಿಯಲ್ಲಿ 17 ಹಳ್ಳಿಗಳಿದ್ದು, 43 ಸಾವಿರ ಜನಸಂಖ್ಯೆ ಇದೆ.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಬೇರೆ ಕೇಂದ್ರಕ್ಕೆ ನಿಯೋಜನೆಗೊಂಡಿದ್ದಾರೆ. ಗುತ್ತಿಗೆ ಆಧಾರದ ಆಯುಷ್ ವೈದ್ಯರು ಮಾತ್ರ ಇದ್ದಾರೆ. ನಾಲ್ವರು ಶುಶ್ರೂಷಕಿಯರು ಇರಬೇಕೆಂಬ ನಿಯಮವಿದೆ. ಆದರೆ, ಕಾಯಂ ಸಿಬ್ಬಂದಿ ಇಲ್ಲದ ಕಾರಣ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಮೂವರು ಕಾರ್ಯನಿರ್ವಹಿಸುತ್ತಿದ್ದಾರೆ. 17 ಹಳ್ಳಿಗಳ ವ್ಯಾಪ್ತಿಯಲ್ಲಿ 6 ಆರೋಗ್ಯ ಉಪಕೇಂದ್ರಗಳಿವೆ. 6 ಆರೋಗ್ಯ ಸಂರಕ್ಷಣಾಧಿಕಾರಿ ಮತ್ತು 6 ಆರೋಗ್ಯ ನಿರೀಕ್ಷಕರು ಸೇರಿ 12 ಜನ ಇರಬೇಕಿತ್ತು. ಆದರೆ, 7 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
‘ಕೇಂದ್ರಕ್ಕೆ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಕೇವಲ 6 ಹಾಸಿಗೆ ಸೌಲಭ್ಯವಿದೆ. ಸಿಬ್ಬಂದಿ ಕೊರತೆಯಿಂದ ಎಲ್ಲ ರೋಗಿಗಳಿಗೆ ಸಕಾಲಕ್ಕೆ ಸೇವೆ ದೊರೆಯುತ್ತಿಲ್ಲ. ಅನಿವಾರ್ಯವಾಗಿ ನಗರಪ್ರದೇಶಗಳಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸ ವಿ. ಹನುಮೇಶ.
ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಒತ್ತಾಯಿಸಿ ಇತ್ತೀಚೆಗೆ ಸರಣಿ ಪ್ರತಿಭಟನೆ ನಡೆಸಲಾಗಿತ್ತು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ ಭರವಸೆ ನೀಡಿದ್ದಾರೆ. ಭರವಸೆ ಯಾವಾಗ ಈಡೇರುವುದೆಂದು ಜನರು ಎದುರು ನೋಡುತ್ತಿದ್ದಾರೆ.
ಕೇಂದ್ರದಲ್ಲಿ ಇರುವ ವೈದ್ಯಕೀಯ ಸಿಬ್ಬಂದಿ ಜನರಿಗೆ ಸೇವೆ ನೀಡುತ್ತಿದ್ದಾರೆ. ಜನಸಂಖ್ಯೆ ಆಧಾರದಲ್ಲಿ ಮೇಲ್ದರ್ಜೆಗೇರಿಸುವ ಅಗತ್ಯವಿದೆಕೆ.ನಾಗರಾಜ ಗುತ್ತಿಗೆ ವೈದ್ಯ
ಜಿಲ್ಲಾಡಳಿತಕ್ಕೆ ಗ್ರಾಮೀಣ ಜನರು ಎದುರಿಸುತ್ತಿರುವ ಸಮಸ್ಯೆ ಕಾಣುತ್ತಿಲ್ಲ. ಸರ್ಕಾರಿ ಸೌಲಭ್ಯ ಪಡೆಯಲು ಹೋರಾಟ ಅನಿವಾರ್ಯವಾಗಿದೆಲಕ್ಷ್ಮಣ ಭಂಡಾರಿ ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.