
ಹೂವಿನಹಡಗಲಿ: ‘ನಾಡಿನ ವೀರಶೈವ ಲಿಂಗಾಯತ ಮಠಗಳು ಜಾತ್ಯತೀತವಾಗಿ ಎಲ್ಲ ಸಮುದಾಯದವರಿಗೆ ಅನ್ನ, ಅಕ್ಷರ, ಜ್ಞಾನ ದಾಸೋಹ ನೀಡುವ ಮೂಲಕ ಸಮಾಜದ ಬೆಳವಣಿಗೆಗೆ ಅನನ್ಯ ಕೊಡುಗೆ ನೀಡಿವೆ’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.
ಪಟ್ಟಣದ ಗವಿಸಿದ್ದೇಶ್ವರ ಸ್ವಾಮಿಯ 31ನೇ ವರ್ಷದ ಜಾತ್ರೆ ಅಂಗವಾಗಿ ಶುಕ್ರವಾರ ನಡೆದ ಭಕ್ತ ಹಿತ ಚಿಂತನಾ ಸಭೆಯಲ್ಲಿ ‘ಗವಿಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕೊಪ್ಪಳ ಮುಖಂಡ ಸಿ.ವಿ.ಚಂದ್ರಶೇಖರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನುಡಿದಂತೆ ನಡೆದು ಆದರ್ಶವಾಗಿದ್ದಾರೆ. ಜಾತ್ರೆಯನ್ನು ಬರೀ ಆಚರಣೆಗೆ ಸೀಮಿತಗೊಳಿಸದೇ ವಿಶೇಷ ಅರ್ಥ ತಂದುಕೊಟ್ಟಿದ್ದಾರೆ ಎಂದರು.
ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಲಿಂ.ಲಿಂಗೇಶ್ವರ ಸ್ವಾಮೀಜಿ ಶಾಖಾ ಮಠಕ್ಕೆ ಉತ್ತಮ ಬುನಾದಿ ಹಾಕಿದ್ದಾರೆ. ಅವರ ಆಶಯದಂತೆ ಮಠವನ್ನು ಜೀರ್ಣೋದ್ದಾರ ಮಾಡಿರುವ ಹಿರಿಶಾಂತವೀರ ಸ್ವಾಮೀಜಿ ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹಿರಿಶಾಂತವೀರ ಸ್ವಾಮೀಜಿ, ಕೊಟ್ಟೂರು ಚಾನುಕೋಟಿ ಮಠದ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ, ಹೆಬ್ಬಾಳ ನಾಗಭೂಷಣ ಸ್ವಾಮೀಜಿ, ಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಮಂಗಳೂರಿನ ಸಿದ್ದಲಿಂಗ ಸ್ವಾಮೀಜಿ, ಹಿರೇವಡ್ಡಟ್ಟಿಯ ವೀರೇಶ್ವರ ಸ್ವಾಮೀಜಿ, ಹೊಳಲಿನ ಚನ್ನಬಸವ ದೇವರು, ಚೌಕಿಮಠದ ಗಾಡಿತಾತ ಸಾನ್ನಿಧ್ಯ ವಹಿಸಿದ್ದರು.
ಭಕ್ತಿಸೇವೆ ಸಲ್ಲಿಸಿದ ಭಕ್ತರಿಗೆ ಗುರುರಕ್ಷೆ ನೀಡಲಾಯಿತು. ಗವಿಶ್ರೀ ಅಕ್ಕನ ಬಳಗದವರು ‘ಜೋಕುಮಾರಸ್ವಾಮಿ’ ಕಿರುನಾಟಕ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.