ADVERTISEMENT

ವಾಹನ ಚಾಲಕರಿಂದ ಪ್ರತಿಭಟನಾ ರ್‍ಯಾಲಿ

ಸರ್ಟಿಫಿಕೇಟ್‌ ಆಧಾರಿತ ಸ್ಟಿಕ್ಕರ್‌ ಆದೇಶ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 13:58 IST
Last Updated 12 ಸೆಪ್ಟೆಂಬರ್ 2022, 13:58 IST
ತಾಲ್ಲೂಕು ವಾಹನ ಸಾರಿಗೆ ಚಾಲಕರ ಹಾಗೂ ಮಾಲೀಕರ ಸಂಘಗಳ ಒಕ್ಕೂಟದವರು ಸೋಮವಾರ ಹೊಸಪೇಟೆಯಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು
ತಾಲ್ಲೂಕು ವಾಹನ ಸಾರಿಗೆ ಚಾಲಕರ ಹಾಗೂ ಮಾಲೀಕರ ಸಂಘಗಳ ಒಕ್ಕೂಟದವರು ಸೋಮವಾರ ಹೊಸಪೇಟೆಯಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು   

ಹೊಸಪೇಟೆ: ಖಾಸಗಿ ಕಂಪನಿಗಳ ಸರ್ಟಿಫಿಕೇಟ್‌ ಆಧಾರಿತ ಸ್ಟಿಕ್ಕರ್‌ಗಳನ್ನು ವಾಹನಗಳ ಮೇಲೆ ಅಂಟಿಸಬೇಕೆಂಬ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿ ತಾಲ್ಲೂಕು ವಾಹನ ಸಾರಿಗೆ ಚಾಲಕರ ಹಾಗೂ ಮಾಲೀಕರ ಸಂಘಗಳ ಒಕ್ಕೂಟದವರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌.ಟಿ.ಒ.) ವರೆಗೆ ರ್‍ಯಾಲಿ ನಡೆಸಿದರು. ಮಾರ್ಗದುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅನಂತರ ಆರ್‌.ಟಿ.ಒ. ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರಿಗೆ ಮನವಿ ಪತ್ರ ಸ್ವೀಕರಿಸಿದರು.

‘ನಿಮ್ಮೆಲ್ಲರ ಸಮಸ್ಯೆಯ ಬಗ್ಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರೊಂದಿಗೆ ಚರ್ಚಿಸಿ, ಪರಿಹಾರ ಒದಗಿಸಲು ಶ್ರಮಿಸುತ್ತೇನೆ’ ಎಂದು ಆನಂದ್‌ ಸಿಂಗ್‌ ಭರವಸೆ ನೀಡಿದರು.

ADVERTISEMENT

ಕೋವಿಡ್‌ ಲಾಕ್‌ಡೌನ್‌, ಪೆಟ್ರೋಲ್‌–ಡೀಸೆಲ್‌ ಬೆಲೆ ಏರಿಕೆ, ಥರ್ಡ್‌ ಪಾರ್ಟಿ ಇನ್‌ಶೂರೆನ್ಸ್‌, ತೆರಿಗೆ ಹೆಚ್ಚಳ, ವಾಹನ ಬಿಡಿಭಾಗಗಳ ಬೆಲೆ ಏರಿಕೆಯಿಂದ ವಾಹನ ಮಾಲೀಕರು ಹಾಗೂ ಚಾಲಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗ ಸರ್ಟಿಫಿಕೇಟ್‌ ಆಧಾರಿತ ಸ್ಟಿಕ್ಕರ್‌ಗಳನ್ನು ಅಳವಡಿಸಿ ಶುಲ್ಕ ಪಡೆಯಲು ಮುಂದಾಗಿರುವ ಕ್ರಮ ಸರಿಯಲ್ಲ. ಕೂಡಲೇ ಈ ಆದೇಶ ವಾಪಸ್‌ ಪಡೆಯಬೇಕು. ಇಲ್ಲವಾದರೆ ಬರುವ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಸ್ಪೀಡ್‌ ಗವರ್ನರ್‌ ಆದೇಶ ಹಿಂಪಡೆಯಬೇಕು. ಆರ್‌.ಟಿ.ಒ., ಪೊಲೀಸರ ಕಿರುಕುಳ ತಡೆಯಬೇಕು. ವಾಯುಮಾಲಿನ್ಯ ತಪಾಸಣೆ ಅವಧಿ ಒಂದು ವರ್ಷಕ್ಕೆ ವಿಸ್ತರಿಸಬೇಕು. ಸಾರಿಗೆ ವಾಹನ ಚಾಲಕರ ಭದ್ರತಾ ಮಂಡಳಿ ರಚಿಸಿ, ಶ್ರಮ ಯೋಜನೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಮುಖಂಡರಾದ ಕೆ.ಎಂ. ಸಂತೋಷಕುಮಾರ್‌, ರಾಮಚಂದ್ರಬಾಬು, ಪಿ. ವೆಂಕಟೇಶ್‌, ಕೃಷ್ಣ, ಕೆ.ಎಂ. ಕೊಟ್ರೇಶ್‌, ಬಸವರಾಜ, ಯಮುನಪ್ಪ, ಪ್ರಸಾದ್‌, ಸದಾಶಿವ, ಮಾಬು, ಅಸ್ಲಂ, ಹಜರತ್‌ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.