
ಕಂಪ್ಲಿ: ಇಲ್ಲಿನ ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಏಕಾದಶಿ ಪ್ರಯುಕ್ತ ಲಕ್ಷ್ಮೀವೆಂಕಟರಮಣಸ್ವಾಮಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರು ಉತ್ತರದ್ವಾರದ ಬಾಗಿಲ ಮೂಲಕ ಪ್ರವೇಶಿಸಿ ದರ್ಶನ ಪಡೆದರು.
ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತೀ ಶ್ರೀ ಮಾತನಾಡಿ, ‘ಏಕಾದಶಿ ವ್ರತವನ್ನು ಯಾರು ಭಕ್ತಿಯಿಂದ ಆಚರಿಸುತ್ತಾರೋ ಅವರ ಎಲ್ಲ ಕಷ್ಟಗಳು ವಿಷ್ಣು ಪರಿಹಾರ ಮಾಡುತ್ತಾನೆ. ಅದರಲ್ಲೂ ವೈಕುಂಠ ಏಕಾದಶಿ ಸಮಯದಲ್ಲಿ ವಿಷ್ಣುವಿನ ನೆಲೆಯಾದ ವೈಕುಂಠದ ದ್ವಾರಗಳು ತೆರೆಯುತ್ತದೆ. ಈ ವಿಶೇಷ ದಿನದಂದು ವಿಷ್ಣು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿದರೆ ಮೋಕ್ಷ ಸಿಗುತ್ತದೆ ಎಂಬ ಪ್ರತೀತಿ ಇಂದಿಗೂ ಇದೆ’ ಎಂದು ವಿವರಿಸಿದರು.
ದೇವಸ್ಥಾನ ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ, ಭವ್ಯ ವಿಷ್ಣುರಾಜ್, ಹರಿಪ್ರಿಯ, ಆಶ್ವತ್ಥನಾರಾಯಣ, ಜಯಂತ್ ಶ್ರೀವತ್ಸವ, ಭಕ್ತರಾದ ಮೇಸ್ತ್ರಿ ವೆಂಕಟೇಶ, ಕೆ. ಕೃಷ್ಣ ಭಾಗವಹಿಸಿದ್ದರು.
ಸ್ಥಳೀಯ ಡಾ. ರಾಜ್‌ಕುಮಾರ್ ರಸ್ತೆಯ ಗುಡ್ಡದ ತಿಮ್ಮಪ್ಪ ದೇವಸ್ಥಾನದಲ್ಲೂ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ ಜರುಗಿತು. ಗುರುರಾಜಸೇವಾ ಮಂಡಳಿಯಿಂದ ಇಲ್ಲಿನ ಅಮೃತಶಿಲಾರಾಮಚಂದ್ರ ದೇವರ ಉತ್ಸವ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.