ADVERTISEMENT

ಹಂಪಿ ಮರು ಸೃಷ್ಟಿಯಲ್ಲಿ ವಿಜಯನಗರ ಉದಯ

ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟನೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಅಕ್ಟೋಬರ್ 2021, 6:57 IST
Last Updated 3 ಅಕ್ಟೋಬರ್ 2021, 6:57 IST
ಹೊಸಪೇಟೆಯಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ, ಶಾಸಕ ಬಿ.ಎಸ್‌. ಯಡಿಯೂರಪ್ಪ ಜಂಟಿಯಾಗಿ ವಿಜಯನಗರ ಜಿಲ್ಲೆ ಉದ್ಘಾಟಿಸಿದರು. ಸಚಿವರು, ಮಠಾಧೀಶರು ಇದ್ದಾರೆ
ಹೊಸಪೇಟೆಯಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ, ಶಾಸಕ ಬಿ.ಎಸ್‌. ಯಡಿಯೂರಪ್ಪ ಜಂಟಿಯಾಗಿ ವಿಜಯನಗರ ಜಿಲ್ಲೆ ಉದ್ಘಾಟಿಸಿದರು. ಸಚಿವರು, ಮಠಾಧೀಶರು ಇದ್ದಾರೆ   

ಹೊಸಪೇಟೆ (ವಿಜಯನಗರ): ನಗರದ ಜಿಲ್ಲಾ ಕ್ರೀಡಾಂಗಣದ ದಿವ್ಯ, ಭವ್ಯ ವೇದಿಕೆಯಲ್ಲಿ ಮರು ನಿರ್ಮಿಸಿದ ವಿಜಯನಗರ ಸಾಮ್ರಾಜ್ಯದ ಶಿಲ್ಪಕಲಾ ವೈಭವ ಸಾರುವ ನೆಲದಲ್ಲಿ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಶನಿವಾರ ಉದಯಗೊಂಡಿತು.

‘ಎಲ್ಲಾ ಮಾರ್ಗಗಳು ರೋಮ್‌ ಸೇರುತ್ತವೆ’ ಎಂಬ ಮಾತಿನಂತೆ ಶನಿವಾರ ಸಂಜೆ ಜನರ ಪ್ರವಾಹ ಜಿಲ್ಲಾ ಕ್ರೀಡಾಂಗಣದತ್ತ ಮುಖ ಮಾಡಿತು. ಜಿಲ್ಲಾ ಉದ್ಘಾಟನಾ ಸಮಾರಂಭದ ಮುಖ್ಯ ವೇದಿಕೆಯಲ್ಲಿ ಮತ್ತೊಂದು ಹಂಪಿ ಜನ್ಮ ತಳೆದಿತ್ತು. ಎಲ್ಲರ ಚಿತ್ತ ಸೆಳೆಯುವ ಬಣ್ಣಬಣ್ಣದ ವಿದ್ಯುತ್‌ ದೀಪಗಳ ಅಲಂಕಾರ, ಧ್ವನಿ–ಬೆಳಕಿನ ಕಾರ್ಯಕ್ರಮ ಎಲ್ಲರೂ ಕ್ರೀಡಾಂಗಣದತ್ತ ದೌಡಾಯಿಸುವಂತೆ ಮಾಡಿತ್ತು.

ಇಡೀ ನಗರವೇ ವಿದ್ಯುತ್‌ ದೀಪಗಳಲ್ಲಿ ಮಿಂದೆದ್ದಿತ್ತು. ನಗರದಲ್ಲಿ ಹಬ್ಬ, ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು. ಇಂತಹ ಸಂಭ್ರಮದ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲೆ ಘೋಷಣೆಗೆ ಕಾರಣೀಕರ್ತರಾದ ಬಿ.ಎಸ್‌. ಯಡಿಯೂರಪ್ಪನವರು ವಿಜಯನಗರ ಜಿಲ್ಲೆ ಉದ್ಘಾಟಿಸಿದರು.

ADVERTISEMENT

ಸಿ.ಎಂ. ಮಾತನಾಡಿ, ‘ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಹಂತ ಹಂತವಾಗಿ ಈ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ಅಭಯ ನೀಡಿದರು.

ಶಾಸಕ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ‘ಮಹಾತ್ಮ ಗಾಂಧಿ, ಲಾಲ್‌ ಬಹಾದ್ದೂರ್‌ ಶಾಸ್ತ್ರಿಯವರ ಜನ್ಮದಿನದಂದೇ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ. ಈ ಭಾಗದ ಜನರ ಹಲವು ವರ್ಷಗಳ ಹೋರಾಟಕ್ಕೆ ಮನ್ನಣೆ ಸಿಕ್ಕಿದೆ. ಸಣ್ಣ ಜಿಲ್ಲೆ, ತಾಲ್ಲೂಕುಗಳ ರಚನೆಯಿಂದ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದರು.

ಸಾರಿಗೆ ಸಚಿವ ಬಿ. ಶ್ರೀರಾಮುಲು, ‘ಬಳ್ಳಾರಿ, ವಿಜಯನಗರ ಜಿಲ್ಲೆ ಬೇರೆ ಆಗಿರಬಹುದು. ಆದರೆ, ಇವೆರಡು ಎರಡು ಕಣ್ಣುಗಳಿದ್ದಂತೆ. ಹೃದಯ, ಆತ್ಮ ಒಂದೇ. ಈ ಹಿಂದಿನಂತೆ ಎಲ್ಲರೂ ಸಹೋದರರಂತೆ ಬದುಕೋಣ. ಎರಡೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ’ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಮಹಾತ್ಮ ಗಾಂಧೀಜಿ, ಲಾಲ್‌ ಬಹಾದ್ದೂರ್‌ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದರು. ಉಜ್ಜಿನಿಯ ಸಿದ್ಧಲಿಂಗ ಶಿವಾಚಾರ್ಯರು, ದಯಾನಂದ ಪುರಿ ಸ್ವಾಮೀಜಿ, ಮಾತಂಗ ಪೂರ್ಣಾನಂದ ಭಾರತಿ ಸ್ವಾಮೀಜಿ, ಕೊಟ್ಟೂರು ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ, ನಂದಿಪುರ ಮಹೇಶ್ವರ ಸ್ವಾಮೀಜಿ, ಅಭಿನವ ಹಾಲಸಿದ್ಧ ಸ್ವಾಮೀಜಿ, ಜೋಗದ ದಿಗಂಬರ ರಾಜ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯರು ಇದ್ದರು.

'ಆನಂದ್‌ ಸಿಂಗ್‌ ಉಡ ಇದ್ದಂತೆ'
ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಉಡ ಇದ್ದಂತೆ. ಏಕೆಂದರೆ ಉಡದಂತೆ ಅವರು ಬಹಳ ಗಟ್ಟಿ. ಈ ಹಿಂದೆ ಜನ ಉಡ ಕಟ್ಟಿ ಮೇಲೇರುತ್ತಿದ್ದರು. ಅದೇ ರೀತಿ ಆನಂದ್‌ ಸಿಂಗ್‌ ಕೂಡ ಹಠವಾದಿ. ಅಂದುಕೊಂಡ ಕೆಲಸ ಮಾಡುವವರೆಗೆ ಬಿಡುವುದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರ್ಣಿಸಿದರು.

‘ಆನಂದ್‌ ಸಿಂಗ್‌ ಹಠ ಅವರ ವೈಯಕ್ತಿಕ ಸ್ವಾರ್ಥ ಸಾಧನೆಗೆ ಅಲ್ಲ. ಅದು ಜನರ ಹಿತ, ಜಿಲ್ಲೆಯ ಅಭಿವೃದ್ಧಿಗಾಗಿ. ಹೀಗಾಗಿ ಅವರು ಹಠ ಮಾಡುವುದು ತಪ್ಪಲ್ಲ. ಬಡ ಜನರ ಕಲ್ಯಾಣಕ್ಕಾಗಿ ಅವರು ಶ್ರಮಿಸುತ್ತಿದ್ದಾರೆ. ಅವರ ಬೆಂಬಲಕ್ಕೆ ನಮ್ಮ ಸರ್ಕಾರವಿದೆ’ ಎಂದು ಹೇಳಿದರು.

ಒಂದು ಗಂಟೆ ವಿಳಂಬ ಉದ್ಘಾಟನಾ ಸಮಾರಂಭವೂ ನಿಗದಿತ ಸಮಯಕ್ಕಿಂತ ಒಂದು ಗಂಟೆ ವಿಳಂಬವಾಗಿ ಆರಂಭಗೊಂಡಿತು.

ಸಂಜೆ 6ಕ್ಕೆ ಉದ್ಘಾಟನೆಗೆ ಸಮಯ ನಿಗದಿಯಾಗಿತ್ತು. ಆದರೆ, ಮುಖ್ಯಮಂತ್ರಿ 6.50ಕ್ಕೆ ಕಾರ್ಯಕ್ರಮದ ಸ್ಥಳಕ್ಕೆ ಬಂದರು. ವೇದಿಕೆ ಮೇಲೇರಿದಾಗ ಸಮಯ 7 ಗಂಟೆಯಾಗಿತ್ತು. ಕಾರ್ಯಕ್ರಮ ಶುರುವಾಗುವವರೆಗೆ ಸ್ಥಳೀಯ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟಿದ್ದರಿಂದ ಜನರಿಗೆ ಬೇಸರವಾಗಲಿಲ್ಲ.

ಸಿ.ಎಂ. ಬೊಮ್ಮಾಯಿ, ಮಾಜಿ ಸಿ.ಎಂ. ಬಿ.ಎಸ್‌. ಯಡಿಯೂರಪ್ಪ ಹಾಗೂ ಆನಂದ್‌ ಸಿಂಗ್‌ ಅವರು ಜನರ ಮಧ್ಯದಿಂದ ವೇದಿಕೆಯ ಕಡೆಗೆ ಬರುವಾಗ ಜನರ ಹರ್ಷೊದ್ಘಾರ ಮುಗಿಲು ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.