ಕುರುಗೋಡು: ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಸಾರ್ವಜನಿಕ ರುದ್ರಭೂಮಿ ಮತ್ತು ಸರ್ಕಾರಿ ಜಮೀನು ತೆರವಿಗೆ ಮುಂದಾದ ಅಧಿಕಾರಿಗಳಿಗೆ ನಿವಾಸಿಗಳು ತಡೆಯೊಡ್ಡಿದ ಘಟನೆ ಮಂಗಳವಾರ ಜರುಗಿತು.
ಗ್ರಾಮದಲ್ಲಿ ರುದ್ರಭೂಮಿ ಇರುವ ಸರ್ವೆ 437 ಮತ್ತು ಸರ್ಕಾರಿ ಭೂಮಿ ಸರ್ವೆ 433 ಸರ್ವೆ ಮಾಡಿ ಒತ್ತುವರಿಯನ್ನು ತೆರವುಗೊಳಿಸುವಂತೆ ಹಳ್ಳಿ ಮರದ ವೀರೇಶ ಮತ್ತು ಸ್ನೇಹಿತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಮನವಿ ಪರಿಶೀಲಿಸಿದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದ್ದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ್ದ ತಾಲ್ಲೂಕು ಭೂ ಮಾಪನ ಅಧಿಕಾರಿ ನಿರಂಜನ್, ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಸ್ವಾಮಿ, ಅಭಿವೃದ್ಧಿ ಅಧಿಕಾರಿ ಯು,ರಾಮಪ್ಪ ಅವರನ್ನು ನಿವಾಸಿಗಳು ತಡೆದು ಸಮಯಾವಕಾಶ ನೀಡುವಂತೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಅವರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಿ. ನೀವು ನೀಡಿದ ಮನವಿಯನ್ನು ನಮ್ಮ ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿ ಮರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.