ಕಡತ
(ಸಾಂದರ್ಭಿಕ ಚಿತ್ರ)
ಬಳ್ಳಾರಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ₹42.53 ಅನುದಾನದಲ್ಲಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಕೈಗೊಳ್ಳಬೇಕಿದ್ದ ಕಾಮಗಾರಿಗಳ ಸಂಬಂಧ ವಿವಿಯ ಈ ಹಿಂದಿನ ಕುಲಸಚಿವ ಎಸ್.ಎನ್ ರುದ್ರೇಶ್ ಅವರು ಬರೆದಿರುವ ಪತ್ರವೊಂದು ವಿ.ವಿಯಲ್ಲಿನ ಬೆಳವಣಿಗೆಗಳ ಕುರಿತು ಪ್ರಶ್ನೆಗಳು ಏಳುವಂತೆ ಮಾಡಿದೆ.
ಐದು ಕಾಮಗಾರಿಗಳಿಗೆ ಸಂಬಂಧಿಸಿದ ವಸ್ತುಗಳಿಗೆ ಮಾರುಕಟ್ಟೆ ದರಗಳನ್ನು ಪಡೆಯಲು ಅರ್ಹ ಏಜೆನ್ಸಿಗಳು, ವರ್ತಕರು, ಡೀಲರ್‌ಗಳಿಂದ ಕರೆಯಲಾಗಿದ್ದ ‘ಎಕ್ಸ್‌ಪ್ರೆಷನ್ ಆಫ್ ಇಂಟ್ರೆಸ್ಟ್’ನ ಸಭೆಯನ್ನು ಕುಲಪತಿ ಹಲವು ಬಾರಿ ಮುಂದೂಡಿದ್ದೂ ಅಲ್ಲದೇ, ಕೊನೆಗೆ ಸಭೆ ನಡೆಸಲು ಸಮಯವನ್ನೇ ನಿಗದಿ ಮಾಡದಿರುವ ಹಿನ್ನೆಲೆಯಲ್ಲಿ ರುದ್ರೇಶ್ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪತ್ರವೊಂದನ್ನು ಬರೆದಿದ್ದರು.
ಕೆಕೆಆರ್‌ಡಿಬಿ ಅನುದಾನದ ಐದು ಕಾಮಗಾರಿಗಳ ವಸ್ತುಗಳ ದರಪಟ್ಟಿಗಾಗಿ ಎಕ್ಸ್‌ಪ್ರೆಷನ್ ಆಫ್ ಇಂಟ್ರಸ್ಟ್ ಸಲ್ಲಿಸಲು ಮೊದಲಿಗೆ ಹೊರಡಿಸಲಾಗಿದ್ದ ಪ್ರಕಟಣೆಯನ್ನು ಕುಲಸಚಿವರ ಮೌಖಿಕ ಸೂಚನೆಯ ಮೇರೆಗೆ ಹಿಂಪಡೆಯಲಾಗಿತ್ತು. ಬಳಿಕ ತಿದ್ದುಪಡಿ ಮಾಡಿ ಮತ್ತೊಮ್ಮೆ ಪ್ರಕಟಿಸಲಾಗಿತ್ತು. ಎಕ್ಸ್‌ಪ್ರೆಷನ್ ಆಫ್ ಇಂಟ್ರಸ್ಟ್ ಸಭೆಗಳನ್ನು ಎರಡು ಬಾರಿ ವಿವಿಧ ದಿನಾಂಕಗಳಲ್ಲಿ ನಿಗದಿ ಮಾಡಲಾಗಿತ್ತಾದರೂ, ಕುಲಪತಿಗಳ ಮೌಖಿಕ ಸೂಚನೆ ಮೇರೆಗೆ ಎರಡು ಬಾರಿಯೂ ಮುಂದೂಡಲಾಗಿತ್ತು ಎಂದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಕೆಕೆಆರ್‌ಡಿಬಿಯ ಕಾರ್ಯದರ್ಶಿಗೆ ಪತ್ರ ಬರೆದಿದ್ದ ರುದ್ರೇಶ್, ‘ವಿಶ್ವವಿದ್ಯಾಲಯದ ಕುಲಸಚಿವರಿಗೆ ಸೆಕ್ಷನ್ 17ಸಿ ಅಧಿಕಾರಗಳನ್ನು ಹೊರತುಪಡಿಸಿ ಉಳಿದ ಶೈಕ್ಷಣಿಕ, ಆಡಳಿತಾತ್ಮಕ, ಆರ್ಥಿಕ ಮತ್ತು ಇತರೆ ಎಲ್ಲಾ ಅಧಿಕಾರಗಳು ಕುಲಪತಿಗೇ ಇರುವುದರಿಂದ ‘ಎಕ್ಸ್‌ಪ್ರೆಷನ್ ಆಫ್ ಇಂಟ್ರೆಸ್ಟ್’ ಕರೆಯಲು ಕುಲಪತಿಗೆ ಮಂಡಳಿಯು ಪತ್ರದ ಮೂಲಕ ತಿಳಿಸಬೇಕು’ ಎಂದಿದ್ದರು.
ರುದ್ರೇಶ್ ಅವರ ಈ ಪತ್ರವು ಹಲವು ಪ್ರಶ್ನೆಗಳು ಉದ್ಭವವಾಗುವಂತೆ ಮಾಡಿದೆ. ಎಕ್ಸ್‌ಪ್ರೆಷನ್ ಆಫ್ ಇಂಟ್ರಸ್ಟ್‌ನ ಪ್ರಕಟಣೆಯನ್ನು ಕುಲಪತಿಗಳು ತಿದ್ದುಪಡಿ ಮಾಡಿದ್ದು ಯಾಕೆ? ಎಕ್ಸ್‌ಪ್ರೆಷನ್ ಆಫ್ ಇಂಟ್ರೆಸ್ಟ್‌ನ ಸಭೆಗಳನ್ನು ಮೇಲಿಂದ ಮೇಲೆ ಮುಂದೂಡಿದ್ದು ಯಾಕೆ? ಯಾವ ಉದ್ದೇಶಕ್ಕೆ? ಈವರೆಗೆ ಸಭೆಯನ್ನು ನಿಗದಿ ಮಾಡದೇ ಇರುವುದು ಏಕೆ? ಎಂಬ ಪ್ರಶ್ನೆಗಳು ಎದ್ದಿವೆ.
ಕುತೂಹಲಕಾರಿ ಸಂಗತಿ ಎಂದರೆ, ಪತ್ರ ಬರೆದ ಎರಡೇ ತಿಂಗಳಿಗೆ ಕುಲಸಚಿವ ಎಸ್.ಎನ್ ರುದ್ರೇಶ್ ಅವರು ಬೇರೆ ಇಲಾಖೆಗೆ ವರ್ಗಾವಣೆಗೊಂಡಿದ್ದು, ಇವೆಲ್ಲವೂ ವಿಶ್ವವಿದ್ಯಾಲಯದ ಬಗ್ಗೆ ಹಲವು ಅನುಮಾನಗಳು ಮೂಡುವಂತೆ ಮಾಡಿದೆ.
ಕಾಮಗಾರಿಗಳು ಯಾವುವು?
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಕಲ್ಯಾಣ ಕರ್ನಾಟಕದ ಭಾಗದ ಅಭಿವೃದ್ಧಿಗಾಗಿ 2024–25ನೇ ಸಾಲಿನಲ್ಲಿ ₹5 ಸಾವಿರ ಕೋಟಿಗಳನ್ನು ಮೀಸಲಿಟ್ಟಿತ್ತು. ಇದರಲ್ಲಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ₹250 ಕೋಟಿ ಮೀಸಲಾಗಿತ್ತು. ಈ ಪೈಕಿ ವಿಎಸ್‌ಕೆಯುನ ಐದು ಕಾಮಗಾರಿಗಳಿಗೆ ಒಟ್ಟು ₹42.53 ಕೋಟಿ ಮಂಜೂರಾಗಿತ್ತು.
ವಿವಿಯಲ್ಲಿ ರೆಕಾರ್ಡಿಂಗ್ ಮತ್ತು ಸ್ಟ್ರೀಮಿಂಗ್ ಸೌಲಭ್ಯವಿರುವ ಉಪನ್ಯಾಸ ಸಭಾಂಗಣಗಳ ಡಿಜಿಟಲೀಕರಣ, ಹೈಬ್ರೀಡ್ ಕಲಿಕಾ ಸೌಲಭ್ಯ, 500 ಕಿಲೋ ವ್ಯಾಟ್ ರೂಫ್ ಟಾಪ್ ಸೌರ ವಿದ್ಯುತ್ ಗ್ರಿಡ್, ಸೋಲಾರ್ ಬೀದಿ ದೀಪ ಮತ್ತು 200 ವ್ಯಾಟ್ ಸೋಲಾರ್ ಹೈ ಮಾಸ್ಕ್ ಅಳವಡಿಕೆ, ಸ್ನಾತಕೋತ್ತರ ಪ್ರಯೋಗಾಲಯಗಳ (ಮಾಡ್ಯುಲರ್ ಲ್ಯಾಬ್) ಉನ್ನತೀಕರಣ ಮತ್ತು ವೈಜ್ಞಾನಿಕ ಉಪಕರಣಗಳ ಖರೀದಿ, ಸ್ಥಾಪನೆ, ಹಾಸ್ಟೆಲ್ ಪೀಠೋಪಕರಣಗಳು, ಗ್ರಂಥಾಲಯ ಪೀಠೋಪಕರಣಗಳು ಮತ್ತು ಇತರ ವಿಭಾಗಗಳಿಗೆ ಪೀಠೋಪಕರಣಗಳನ್ನು ಅಳವಡಿಸಲು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇವುಗಳಿಗೆ ದರಪಟ್ಟಿಗಳನ್ನು ಆಹ್ವಾನಿಸಲಾಗಿತ್ತು ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.