ADVERTISEMENT

ಕಾಲುವೆಗೆ ನೀರು; ರೈತರಿಗೆ ಸಂತಸ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 15:16 IST
Last Updated 12 ಜುಲೈ 2021, 15:16 IST

ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯದ ಮೇಲ್ಮಟ್ಟದ ಕಾಲುವೆ (ಎಚ್‌ಎಲ್‌ಸಿ), ಕೆಳಮಟ್ಟದ ಕಾಲುವೆ (ಎಲ್‌ಎಲ್‌ಸಿ) ಹಾಗೂ ವಿಜಯನಗರದ ಉಪಕಾಲುವೆಗಳಿಗೆ ಜು. 18ರಿಂದ ನೀರು ಹರಿಸಲು ಸೋಮವಾರ ಮುನಿರಾಬಾದ್‌ನಲ್ಲಿ ನಡೆದ 115ನೇ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ತೀರ್ಮಾನಕ್ಕೆ ರೈತ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

ಎಚ್‌ಎಲ್‌ಸಿಗೆ ಜು. 18ರಿಂದ ನ. 30ರ ವರೆಗೆ ನಿತ್ಯ 1,130 ಕ್ಯುಸೆಕ್‌, ಎಲ್‌ಎಲ್‌ಸಿಗೆ ನಿತ್ಯ 700 ಕ್ಯುಸೆಕ್, ಉಪಕಾಲುವೆಗಳಿಗೆ 235 ಕ್ಯುಸೆಕ್‌ ನೀರು ಹರಿಸಲು ನಿರ್ಧರಿಸಲಾಗಿದೆ. ಮೊದಲ ಬೆಳೆಗೆ ಸಕಾಲಕ್ಕೆ ನೀರು ಹರಿಸಲು ಕೈಗೊಂಡಿರುವ ಈ ನಿರ್ಧಾರದಿಂದ ರೈತರಿಗೆ ಸಹಾಯವಾಗಲಿದೆ ಎಂದು ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.

‘ಜು. 15ರಿಂದ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕೆನ್ನುವುದು ನಮ್ಮ ಬೇಡಿಕೆಯಾಗಿತ್ತು. ಆದರೆ, ಮೂರು ದಿನ ತಡವಾಗಿ ಹರಿಸಲು ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೂ ನಾವು ಇದನ್ನು ಸ್ವಾಗತಿಸುತ್ತೇವೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಈಗಷ್ಟೇ ಮಳೆಗಾಲ ಆರಂಭವಾಗಿದೆ. ಜಲಾಶಯದಲ್ಲಿ 35 ಟಿಎಂಸಿ ಅಡಿ ನೀರಿದೆ. ಮೊದಲ ಬೆಳೆಗೆ ನೀರು ಹರಿಸಲು ಯಾವುದೇ ಸಮಸ್ಯೆಯಿಲ್ಲ. ಅದನ್ನರಿತೇ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಪ್ರತಿವರ್ಷ ಆಗಸ್ಟ್‌ ಮಧ್ಯ ಅಥವಾ ಕೊನೆಯಲ್ಲಿ ಜಲಾಶಯ ತುಂಬುತ್ತದೆ. ಅಪಾರ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತದೆ. ಹೀಗಾಗಿ ಯಾವುದೇ ಸಮಸ್ಯೆ ಆಗುವುದಿಲ್ಲ. ಎರಡನೇ ಬೆಳೆಗೂ ತೊಂದರೆ ಆಗುವುದಿಲ್ಲ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.