ADVERTISEMENT

ಎರಡನೇ ಬೆಳೆಗೆ ನೀರು; ರೈತರಲ್ಲಿ ಸಂತಸ

ಕೊನೆಗೂ ರೈತರ ಹೋರಾಟಕ್ಕೆ ಮಣಿದ ಸರ್ಕಾರ; ನೀರು ಹರಿಸಲು ತೀರ್ಮಾನ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 18 ನವೆಂಬರ್ 2018, 16:17 IST
Last Updated 18 ನವೆಂಬರ್ 2018, 16:17 IST

ಹೊಸಪೇಟೆ: ಕೊನೆಗೂ ರೈತರ ಹೋರಾಟಕ್ಕೆ ಸರ್ಕಾರ ಮಣಿದಿದ್ದು, ಎರಡನೇ ಬೆಳೆಗೆ ನೀರು ಹರಿಸಲು ಭಾನುವಾರ ಇಲ್ಲಿನ ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ.) ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ.

ತುಂಗಭದ್ರಾ ಅಣೆಕಟ್ಟೆಯ ಬಲದಂಡೆ ಕೆಳಮಟ್ಟದ ಕಾಲುವೆಗೆ (ಎಲ್‌.ಎಲ್‌.ಸಿ.) ಡಿ. 26ರಿಂದ ಮಾ. 30ರ ವರೆಗೆ ನಿತ್ಯ 450 ಕ್ಯುಸೆಕ್‌ ನೀರು ಯಾವುದೇ ಅಡೆತಡೆಯಿಲ್ಲದೆ ಹರಿಸಲು ಸಭೆ ಒಕ್ಕೊರಲ ನಿರ್ಧಾರ ಕೈಗೊಂಡಿದೆ. ಸತತ ಐದು ವರ್ಷಗಳ ನಂತರ ರೈತರ ಎರಡನೇ ಬೆಳೆಗೆ ಈ ವರ್ಷ ನೀರು ಹರಿಯಲಿದೆ. ಅವಿರತ ಹೋರಾಟದ ಫಲವಾಗಿ ರೈತರಿಗೆ ದೊಡ್ಡ ಜಯ ಸಿಕ್ಕಿದ್ದು. ಕಾಲುವೆ ಭಾಗದ ನೂರಾರು ರೈತರು ಸಂತಸಗೊಂಡಿದ್ದಾರೆ.

ಭಾನುವಾರ ಬೆಳಿಗ್ಗೆ ಹತ್ತು ಗಂಟೆಗೆ ಆರಂಭಗೊಂಡಿದ್ದ ಸಭೆ ಸಂಜೆ ವರೆಗೆ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಇದರಿಂದ ರೈತರು ಚಿಂತೆಗೀಡಾಗಿದ್ದರು. ಆದರೆ, ಸಂಜೆ 4.30ಕ್ಕೆ ನೀರು ಹರಿಸುವ ಕುರಿತು ಅಧಿಕೃತ ಘೋಷಣೆ ಹೊರಬೀಳುತ್ತಿದ್ದಂತೆ ರೈತ ಸಮೂಹ ಸಂಭ್ರಮಿಸಿತು. ಸರ್ಕಾರದ ಈ ಕ್ರಮಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಜಿಲ್ಲೆಯ ಎಲ್ಲ ಶಾಸಕರು, ನೂತನ ಸಂಸದರು ಸಭೆಯಲ್ಲಿ ರೈತರ ಪರ ಪ್ರಬಲವಾಗಿ ಧ್ವನಿ ಎತ್ತಿದರು. ಇತ್ತೀಚೆಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರೈತರ ಪರ ನಿರ್ಧಾರ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದರು. ಜತೆಗೆ ಅವಿರತ ಹೋರಾಟದಿಂದ ರೈತರ ಪರ ಸಭೆ ನಿರ್ಧಾರ ತೆಗೆದುಕೊಂಡಿದೆ. ರೈತರ ಪರ ವಕಾಲತ್ತು ಮಾಡಿರುವ ಎಲ್ಲರಿಗೂ ಇಡೀ ರೈತ ವರ್ಗ ಕೃತಜ್ಞತೆ ಸಲ್ಲಿಸುತ್ತದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಅನೇಕ ಐ.ಸಿ.ಸಿ. ಸಭೆಗೆ ನಾನು ಹಾಜರಾಗಿದ್ದೇನೆ. ಆದರೆ, ಒಗ್ಗಟ್ಟಿನಿಂದ ನಮ್ಮ ಭಾಗದ ಜನಪ್ರತಿನಿಧಿಗಳು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿರಲಿಲ್ಲ. ಈ ಸಲ ಎಲ್ಲರೂ ಪಕ್ಷಭೇದ ಮರೆತು ದನಿ ಎತ್ತಿದ್ದಾರೆ. ಈ ಕಾರಣಕ್ಕಾಗಿ ರೈತರಿಗೆ ನ್ಯಾಯ ಸಿಕ್ಕಿದೆ’ ಎಂದು ಹೇಳಿದರು.

‘ಹೋದ ವರ್ಷ ಎರಡನೇ ಬೆಳೆಗೆ ನೀರು ಹರಿಸದ ಕಾರಣ ₨600 ಕೋಟಿಗೂ ಅಧಿಕ ನಷ್ಟವಾಗಿತ್ತು. ಸಾಲ ಮಾಡಿದ್ದ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಸಲ ಎರಡನೇ ಬೆಳೆಗೆ ನೀರು ಹರಿಸುವುದರಿಂದ ರೈತರು ಸಂಕಷ್ಟದಿಂದ ಹೊರಬರಲು ಸಾಧ್ಯವಾಗಬಹುದು’ ಎಂದು ತಿಳಿಸಿದರು.

‘ಈ ಸಲ ಜಲಾಶಯ ಭರ್ತಿ ಆಗಿದ್ದರೂ ಎರಡನೇ ಬೆಳೆಗೆ ನೀರು ಹರಿಸಲು ಸರ್ಕಾರ ಮೀನಮೇಷ ಮಾಡಿತ್ತು. ಯಾವ ವರ್ಷ ಎಷ್ಟು ಮಳೆಯಾಗುತ್ತದೆಯೋ ಗೊತ್ತಿಲ್ಲ. ಸರ್ಕಾರ ಸಮನಾಂತರ ಜಲಾಶಯ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಅಣಕಟ್ಟೆಯಿಂದ ನದಿಗೆ ಹರಿದು ಹೋಗುವ ನೀರನ್ನು ಕೆರೆ ಕಟ್ಟೆಗಳಿಗೆ ತುಂಬಿಸಬೇಕು. ದೂರದೃಷ್ಟಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳದ ಹೊರತು ರೈತರು ಸಂಕಷ್ಟದಿಂದ ಹೊರಬರಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರದ ನಿರ್ಧಾರ ಸ್ವಾಗತಾರ್ಹವಾದುದು. ಎರಡನೇ ಬೆಳೆಗೆ ನೀರು ಬಿಡುವುದರಿಂದ ರೈತರು ಕಷ್ಟದಿಂದ ಹೊರಬರಬಹುದು. ರೈತರ ಸಂಕಷ್ಟಕ್ಕೆ ಸ್ಪಂದಿಸಿರುವುದು ಒಳ್ಳೆಯ ನಿರ್ಧಾರ’ ಎಂದು ರೈತ ಮುಖಂಡ ಬಸವರಾಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.